ಭಾರತದಲ್ಲಿ ಫೆಬ್ರವರಿ 18 ರಿಂದ ಮಾರ್ಚ್ 9 ರವರೆಗೆ ವಿಶ್ವ ಸುಂದರಿ ಸ್ಪರ್ಧೆ!
ನವದೆಹಲಿ: ಬಹು ನಿರೀಕ್ಷಿತ 71ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆ ಭಾರತದಲ್ಲಿ ಫೆಬ್ರವರಿ 18 ರಿಂದ ಮಾರ್ಚ್ 9 ರವರೆಗೆ ನಡೆಯಲಿದೆ ಎಂದು ಆಯೋಜಕರು ಶುಕ್ರವಾರ ತಿಳಿಸಿದ್ದಾರೆ. ಈ ಮೂಲಕ ಸುಮಾರು ದಶಕಗಳ ನಂತರ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆ ದೇಶಕ್ಕೆ ಮರಳುತ್ತಿದೆ.
ಫೆಬ್ರವರಿ 20 ರಂದು ನವದೆಹಲಿಯಲ್ಲಿ ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಉದ್ಘಾಟನಾ ಸಮಾರಂಭ ಮತ್ತು "ಇಂಡಿಯಾ ವೆಲ್ಕಮ್ಸ್ ದಿ ವರ್ಲ್ಡ್ ಗಾಲಾ"ದೊಂದಿಗೆ ಪ್ರತಿಷ್ಠಿತ ಸ್ಪರ್ಧೆ ಪ್ರಾರಂಭವಾಗುತ್ತದೆ. ಇದು ಮಾರ್ಚ್ 9 ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಗ್ರ್ಯಾಂಡ್ ಫಿನಾಲೆಯೊಂದಿಗೆ ಮುಕ್ತಾಯಗೊಳ್ಳಲಿದ್ದು, ವಿಶ್ವದಾದ್ಯಂತ ಪ್ರಸಾರವಾಗಲಿದೆ.
ಈ ಸ್ಪರ್ಧೆಯು ನವದೆಹಲಿಯ ಭಾರತ್ ಮಂಟಪ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಡೆಯಲಿದ್ದು, ವಿವಿಧ ದೇಶಗಳ 120 ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಪ್ರಸ್ತುತ ವಿಶ್ವ ಸುಂದರಿ, ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ, ಮಾಜಿ ವಿಜೇತರಾದ ಟೋನಿ ಆನ್ ಸಿಂಗ್ (ಜಮೈಕಾ), ವನೆಸ್ಸಾ ಪೊನ್ಸ್ ಡಿ ಲಿಯಾನ್ (ಮೆಕ್ಸಿಕೊ), ಮಾನುಷಿ ಛಿಲ್ಲರ್ (ಭಾರತ) ಮತ್ತು ಸ್ಟೆಫನಿ ಡೆಲ್ ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದರು.
ಭಾರತದ ಮೇಲಿನ ಪ್ರೀತಿಯು ರಹಸ್ಯವಾಗಿಲ್ಲ ಮತ್ತು ಈ ದೇಶದಲ್ಲಿ 71 ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆ ನಡೆಸುವುದು ಬಹಳಷ್ಟು ಅರ್ಥಪೂರ್ಣವಾಗಿದೆ. ಭಾರತದಲ್ಲಿ ಸ್ಪರ್ಧೆ ಆಯೋಜನೆ ನಿಟ್ಟಿನಲ್ಲಿ ಜಮಿಲ್ ಸೈದಿ ಅವರ ಕಠಿಣ ಪ್ರಯತ್ನಗಳಿಗಾಗಿ ದೊಡ್ಡ ಧನ್ಯವಾದಗಳು. 71ನೇ ಆವೃತ್ತಿಗೆ ನಾವು ಅತ್ಯುತ್ತಮ ತಂಡವನ್ನು ಒಟ್ಟುಗೂಡಿಸಿದ್ದೇವೆ ಎಂದು ವಿಶ್ವ ಸುಂದರಿ ಸಂಸ್ಥೆಯ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಮೊರ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತವು ಕೊನೆಯದಾಗಿ 1996 ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಆಯೋಜಿಸಿತ್ತು. ಚಿಲ್ಲರ್ ಅವರು 2017 ರಲ್ಲಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಇದಕ್ಕೂ ಮುನ್ನ ನಡೆದ ಸ್ಪರ್ಧೆಯಲ್ಲಿ ರೀಟಾ ಫರಿಯಾ ಪೊವೆಲ್, ಐಶ್ವರ್ಯ ರೈ, ಡಯಾನಾ ಹೇಡನ್, ಯುಕ್ತಾ ಮುಖಿ ಮತ್ತು ಪ್ರಿಯಾಂಕಾ ಚೋಪ್ರಾ ಜೊನಾಸ್ ವಿಶ್ವ ಸುಂದರಿ ಪ್ರಶಸ್ತಿ ಗೆದಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ