
ನವದೆಹಲಿ: ಬರೋಬ್ಬರಿ 27 ವರ್ಷಗಳ ನಂತರ ಭಾರತ ವಿಶ್ವ ಸುಂದರಿ ಸ್ಪರ್ಧೆ 2023 ಅನ್ನು ಆಯೋಜಿಸಲು ಸಿದ್ಧವಾಗಿದ್ದು, ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯು ಸುಮಾರು ಮೂರು ದಶಕಗಳ ಬಳಿಕ ದೇಶಕ್ಕೆ ಮರಳುತ್ತಿದೆ.
ಬಹು ನಿರೀಕ್ಷಿತ ವಿಶ್ವ ಸುಂದರಿ ಸ್ಪರ್ಧೆಯ 71ನೇ ಆವೃತ್ತಿಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ ಈ ವರ್ಷದ ನವೆಂಬರ್‌ನಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.
ಭಾರತವು ಕೊನೆಯದಾಗಿ 1996 ರಲ್ಲಿ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಿತ್ತು.
"71ನೇ ವಿಶ್ವ ಸುಂದರಿ ಸ್ಪರ್ಧೆಯ ಫೈನಲ್ ಭಾರತದಲ್ಲಿ ನಡೆಯಲಿದೆ ಎಂದು ಘೋಷಿಸಲು ನನಗೆ ಸಂತೋಷವಾಗುತ್ತಿದೆ... ನಿಮ್ಮ ಅನನ್ಯ ಮತ್ತು ವೈವಿಧ್ಯಮಯ ಸಂಸ್ಕೃತಿ, ವಿಶ್ವ ದರ್ಜೆಯ ಆಕರ್ಷಣೆಗಳು ಮತ್ತು ಅದ್ಭುತ ಸ್ಥಳಗಳನ್ನು ಪ್ರಪಂಚದ ಇತರರೊಂದಿಗೆ ಹಂಚಿಕೊಳ್ಳಲು ಇನ್ನೂ ನಾವು ಕಾಯಲು ಸಾಧ್ಯವಿಲ್ಲ. 71ನೇ ವಿಶ್ವ ಸುಂದರಿ ಸ್ಪರ್ಧೆಯ ಫೈನಲ್ ಭಾರತದಲ್ಲಿ ನಡೆಯಲಿದ್ದು, 130 ರಾಷ್ಟ್ರೀಯ ಚಾಂಪಿಯನ್‌ಗಳ ಸಾಧನೆಗಳನ್ನು ಪ್ರದರ್ಶಿಸುತ್ತೇವೆ ಎಂದು ಮಿಸ್ ವರ್ಲ್ಡ್ ಸಂಸ್ಥೆಯ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಮೊರ್ಲೆ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
130ಕ್ಕೂ ಹೆಚ್ಚು ದೇಶಗಳ ಸ್ಪರ್ಧಿಗಳು ಭಾಗವಹಿಸುವ ಒಂದು ತಿಂಗಳ ಅವಧಿಯ ಈ ಸ್ಪರ್ಧೆ, ಪ್ರತಿಭಾ ಪ್ರದರ್ಶನ, ಕ್ರೀಡಾ ಸವಾಲುಗಳು ಸೇರಿದಂತೆ ಕಠಿಣ ಸ್ಪರ್ಧೆಗಳ ಸರಣಿಯನ್ನು ಒಳಗೊಂಡಿರುತ್ತದೆ ಎಂದು ಅವರು ಹೇಳಿದ್ದಾರೆ.
Advertisement