ದೇಶದ 12 ರಾಜ್ಯಗಳಲ್ಲಿ 682 JN.1 ಪ್ರಕರಣ ವರದಿ; ನಂ.1 ಸ್ಥಾನದಲ್ಲಿ ಕರ್ನಾಟಕ!
ನವದೆಹಲಿ: ಕೊರೋನಾ ವೈರಸ್ ರೂಪಾಂತರಿ JN.1 ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾದ ನಂತರ ದೇಶಾದ್ಯಂತ ಆತಂಕ ಹೆಚ್ಚಾಗತೊಡಗಿದ್ದು, ಕೋವಿಡ್ ಸೋಂಕಿತರ ಜೊತೆಗೆ ರೂಪಾಂತರಿ JN.1 ಪ್ರಕರಣಗಳ ಸಂಖ್ಯೆ 682ಕ್ಕೆ ಏರಿದೆ.
ದೇಶದ 12 ರಾಜ್ಯಗಳಲ್ಲಿ 682 ಜೆಎನ್.1 ಪ್ರಕರಣಗಳು ವರದಿಯಾಗಿದ್ದು, ಕರ್ನಾಟಕ 199 ಪ್ರಕರಣಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಕೇರಳದಿಂದ 148, ಮಹಾರಾಷ್ಟ್ರದಿಂದ 139, ಗೋವಾದಿಂದ 47, ಗುಜರಾತ್‌ನಿಂದ 36, ಆಂಧ್ರಪ್ರದೇಶದಿಂದ 30, ರಾಜಸ್ಥಾನದಿಂದ 30, ತಮಿಳುನಾಡಿನಿಂದ 26, ದೆಹಲಿಯಿಂದ 21, ಒಡಿಶಾದಿಂದ ಮೂರು, ತೆಲಂಗಾಣದಲ್ಲಿ ಎರಡು ಮತ್ತು ಹರಿಯಾಣದಲ್ಲಿ ಒಂದು ಪ್ರಕರಣ ವರದಿಯಾಗಿದೆ ಎಂದು ಸೋಮವಾರ ಅಧಿಕೃತ ಮೂಲಗಳು ತಿಳಿಸಿವೆ.
ದೇಶದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮತ್ತು JN.1 ರೂಪಾಂತರಿ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ತಕ್ಷಣಕ್ಕೆ ಆತಂಕ ಪಡುವ ಅಗತ್ಯ ಇಲ್ಲ. ಸೋಂಕಿತರಲ್ಲಿ ಹೆಚ್ಚಿನವರು ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದು ಸೌಮ್ಯ ಅನಾರೋಗ್ಯವನ್ನು ಸೂಚಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 605 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ನಾಲ್ವರು ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಇಂದು ಬೆಳಗ್ಗೆ 8 ಗಂಟೆಗೆ ಲಭ್ಯವಾದ ನವೀಕೃತ ಮಾಹಿತಿ ಪ್ರಕಾರ, ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 4,002 ಕ್ಕೆ ಏರಿದೆ. ದೇಶದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4.5 ಕೋಟಿಗೆ (4,50,18,792) ಏರಿಕೆಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ