ರಾಮ ಮಂದಿರ ಉದ್ಘಾಟನೆ: ಜ.22 ರಜೆ ಘೋಷಿಸಿದ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರ!

ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳಿದ್ದ ಕಾಂಗ್ರೆಸ್ ಗೆ ತನ್ನದೇ ಪಕ್ಷದ ಸರ್ಕಾರ ಶಾಕ್ ನೀಡಿದ್ದು, ಜನವರಿ 22ರಂದು ರಜೆ ಘೋಷಣೆ ಮಾಡಿದೆ.
ಹಿಮಾಚಲ ಪ್ರದೇಶ ಸಿಎಂ ಸುಖವಿಂದರ್ ಸಿಂಗ್ ಸುಖು
ಹಿಮಾಚಲ ಪ್ರದೇಶ ಸಿಎಂ ಸುಖವಿಂದರ್ ಸಿಂಗ್ ಸುಖು

ಶಿಮ್ಲಾ: ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳಿದ್ದ ಕಾಂಗ್ರೆಸ್ ಗೆ ತನ್ನದೇ ಪಕ್ಷದ ಸರ್ಕಾರ ಶಾಕ್ ನೀಡಿದ್ದು, ಜನವರಿ 22ರಂದು ರಜೆ ಘೋಷಣೆ ಮಾಡಿದೆ.

ಹೌದು.. ಕಾಂಗ್ರೆಸ್ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶದಲ್ಲಿ ರಾಮಮಂದಿರ ಉದ್ಘಾಟನೆ ನಡೆಯಲಿರುವ ಸೋಮವಾರ ಜನವರಿ 22 ಅಂದರೆ ನಾಳೆ ಸಾರ್ವಜನಿಕ ರಜೆ ಘೋಷಣೆ ಮಾಡಿದೆ. ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಭಾನುವಾರ ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಸಮಾರಂಭದ ದೃಷ್ಟಿಯಿಂದ ಜನವರಿ 22 ರಂದು ಸಾರ್ವಜನಿಕ ರಜೆ ಘೋಷಿಸಿದ್ದಾರೆ.

ಇಂದು ಶಿಮ್ಲಾದ ರಾಮ ಮಂದಿರಕ್ಕೆ ಭೇಟಿ ನೀಡಿದ್ದ ಸಿಎಂ ಸುಖು ಅವರು ರಾಮಮಂದಿರ ಉದ್ಘಾಟನಾ ಸಮಯದಲ್ಲಿ ಮನೆಯಲ್ಲಿ ಮಣ್ಣಿನ ದೀಪಗಳನ್ನು ಬೆಳಗಿಸುವಂತೆ ರಾಜ್ಯದ ಜನತೆಗೆ ಮನವಿ ಮಾಡಿದರು. ಅಂತೆಯೇ ರಾಮಮಂದಿರ ಉದ್ಘಾಟನೆಯಾದ ನಾಳೆ ಕೇಂದ್ರ ಸರ್ಕಾರ ಜನವರಿ 22 ರಂದು ಅರ್ಧ ದಿನ ರಜೆ ಘೋಷಿಸಿದೆ. ಆದರೆ ನಾವು ಪೂರ್ಣ ದಿನದ ರಜೆ ಘೋಷಿಸುತ್ತಿದ್ದೇವೆ. ನಾನು ನನ್ನ ಮನೆಯಲ್ಲಿ ದೀಪವನ್ನು ಬೆಳಗಿಸುತ್ತೇನೆ ಮತ್ತು ಅದೇ ರೀತಿ ಮಾಡಲು ಇತರರನ್ನು ಪ್ರೋತ್ಸಾಹಿಸುತ್ತೇನೆ. ನಾನು ಶೀಘ್ರದಲ್ಲೇ ಅಯೋಧ್ಯೆಯ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ. ಅಲ್ಲದೆ ಜಖುವಿನಲ್ಲಿ ರಾಮನ ಪ್ರತಿಮೆಯನ್ನು ನಿರ್ಮಿಸಲಾಗುವುದು ಎಂದು ಅವರು ದೇವಸ್ಥಾನದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.

ಇದೇ ವೇಳೆ ಮೇಲ್ನೋಟಕ್ಕೆ ಭಾರತೀಯ ಜನತಾ ಪಕ್ಷ (ಬಿಜೆಪಿ)ವನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು, "ಭಗವಾನ್ ರಾಮನು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ, ಅವರು ಪ್ರತಿಯೊಬ್ಬರ ಆದರ್ಶ ಮತ್ತು ದೇಶದ ಸಂಸ್ಕೃತಿ" ಎಂದು ಪರೋಕ್ಷವಾಗಿ ಬಿಜೆಪಿಗೆ ತಿವಿದರು.

ಅಯೋಧ್ಯೆಯ ರಾಮಮಂದಿರದಲ್ಲಿ 'ಪ್ರಾಣ ಪ್ರತಿಷ್ಠಾಪನೆ' ಜನವರಿ 22 ರಂದು ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com