ವಿಚಾರಣೆಯ ಒತ್ತಡ: ಇಡಿ ಅಧಿಕಾರಿಗಳ ವಿರುದ್ಧವೇ ಎಫ್‌ಐಆರ್ ದಾಖಲಿಸಿದ ಸೋರೆನ್
ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರು ರಾಂಚಿಯ ಎಸ್‌ಸಿ/ಎಸ್‌ಟಿ ಪೊಲೀಸ್ ಠಾಣೆಯಲ್ಲಿ ಜಾರಿ ನಿರ್ದೇಶನಾಲಯದ(ಇಡಿ) ಹಿರಿಯ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಸೋರೆನ್ ಅವರ ದೆಹಲಿ ನಿವಾಸದಲ್ಲಿ ಕೇಂದ್ರ ತನಿಖಾ ಸಂಸ್ಥೆ ಇತ್ತೀಚೆಗೆ ನಡೆಸಿದ ಶೋಧ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪೊಲೀಸ್ ಕೇಸ್ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
"ಇಡಿಯ ಕೆಲವು ಹಿರಿಯ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ... ನಾವು ಮುಖ್ಯಮಂತ್ರಿಯಿಂದ ದೂರು ಪಡೆದುಕೊಂಡಿದ್ದೇವೆ" ಎಂದು ರಾಂಚಿಯ ಹಿರಿಯ ಪೊಲೀಸ್ ಅಧೀಕ್ಷಕ ಚಂದನ್ ಕುಮಾರ್ ಸಿನ್ಹಾ ಅವರು ಪಿಟಿಐಗೆ ತಿಳಿಸಿದ್ದಾರೆ. ಆದರೆ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಯಾವುದೇ ವಿವರಗಳನ್ನು ಸಿನ್ಹಾ ನೀಡಿಲ್ಲ.
ಸೋಮವಾರ ಸೋರೆನ್ ಅವರ ದೆಹಲಿ ನಿವಾಸವನ್ನು ಇಡಿ ತಂಡ ಶೋಧಿಸಿತು ಮತ್ತು ಜಾರ್ಖಂಡ್‌ನಲ್ಲಿನ ಭೂ ವ್ಯವಹಾರಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಂದು ಅವರನ್ನು ವಿಚಾರಣೆ ನಡೆಸುತ್ತಿದೆ. ಶೋಧದ ವೇಳೆ 36 ಲಕ್ಷ ರೂ. ಮೌಲ್ಯದ ಒಂದು ಎಸ್‌ಯುವಿ ಕಾರು ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಇಡಿ ಹೇಳಿಕೊಂಡಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋರೆನ್ ಅವರನ್ನು ಪ್ರಸ್ತುತ ಇಡಿ ಅಧಿಕಾರಿಗಳು ರಾಂಚಿಯ ನಿವಾಸದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ