
ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ 2022 ರಲ್ಲಿ ನಡೆದಿದ್ದ ಆರ್‌ಎಸ್‌ಎಸ್ ಮುಖಂಡ ಶ್ರೀನಿವಾಸನ್ ಹತ್ಯೆ ಪ್ರಕರಣದ ಆರೋಪಿಗಳಾಗಿದ್ದ 10 PFI ಸಂಘಟನೆಯ ಕಾರ್ಯಕರ್ತರಿಗೆ ಹೈಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ಮತ್ತು ಪಿವಿ ಬಾಲಕೃಷ್ಣನ್ ಅವರನ್ನೊಳಗೊಂಡ ಪೀಠವು, ಎಲ್ಲಾ 10 ಆರೋಪಿಗಳಿಗೆ ಬಿಗ್ ರಿಲೀಫ್ ನೀಡಿದೆ.
ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ ಎನ್‌ಐಎ ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ಧ ಆರೋಪಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿವರವಾದ ಆದೇಶ ಇನ್ನೂ ಲಭ್ಯವಿಲ್ಲ. ಪ್ರಕರಣದ ಇತರ 17 ಆರೋಪಿಗಳಾಗಿದ್ದ ಪಿಎಫ್‌ಐ ಕಾರ್ಯಕರ್ತರಿಗೂ ಹೈಕೋರ್ಟ್ ಕಳೆದ ವರ್ಷ ಜಾಮೀನು ನೀಡಿತ್ತು.
ಏಪ್ರಿಲ್ 16, 2022 ರಂದು ನಡೆದಿದ್ದ ಶ್ರೀನಿವಾಸನ್ ಹತ್ಯೆಗೆ ಸಂಬಂಧಿಸಿದಂತೆ ಆರಂಭದಲ್ಲಿ 51 ಜನರನ್ನು ಆರೋಪಿಗಳಾಗಿ ವಿಚಾರಣೆಗೆ ಒಳಪಡಿಸಲಾಗಿತ್ತು. ಬಂಧಿತರಲ್ಲಿ ಒಬ್ಬರು ಸಾವನ್ನಪ್ಪಿದರು ಮತ್ತು ಏಳು ಆರೋಪಿಗಳು ತಲೆಮರೆಸಿಕೊಂಡಿರುವ ಕಾರಣ ಅವರನ್ನು ಬಂಧಿಸಲು ಸಾಧ್ಯವಾಗಲಿಲ್ಲ. ಉಳಿದವರ ವಿರುದ್ಧ ಜುಲೈ ಮತ್ತು ಡಿಸೆಂಬರ್ 2022 ರಲ್ಲಿ ಎರಡು ಹಂತಗಳಲ್ಲಿ ಜಾರ್ಜ್ ಶೀಟ್ ಸಲ್ಲಿಸಲಾಗಿತ್ತು.
ಆರೋಪಿಗಳ ವಿರುದ್ಧ ಕೊಲೆ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸುವಂತೆ ಕೇಂದ್ರವು ಡಿಸೆಂಬರ್ 2022 ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA)ನಿರ್ದೇಶನ ನೀಡಿತ್ತು.
ಪಿಎಫ್‌ಐ ಮುಖಂಡ ಸುಬೈರ್ ಅವರನ್ನು ಬಿಜೆಪಿ ಕಾರ್ಯಕರ್ತರು ಹತ್ಯೆಗೈದಿದ್ದ 24 ಗಂಟೆ ಒಳಗಡೆ ಆರ್ ಎಸ್ ಎಸ್ ನ ಮಾಜಿ ಜಿಲ್ಲಾ ಮುಖಂಡ ಎಸ್.ಕೆ. ಶ್ರೀನಿವಾಸ್ ಮೇಲೆ ಪಾಲಕ್ಕಾಡ್‌ನ ಮೇಲಮುರಿಯಲ್ಲಿರುವ ಅವರ ಮೋಟಾರ್‌ಬೈಕ್ ಅಂಗಡಿಯಲ್ಲಿ ಆರು ಜನರ ತಂಡದಿಂದ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿತ್ತು.
Advertisement