
ಮುಂಬೈ: 30ನೇ ಹುಟ್ಟಹಬ್ಬದ ಅಂಗವಾಗಿ ಜಾಮ್ ನಗರದಿಂದ ದೇವಭೂಮಿ ದ್ವಾರಕಾಕ್ಕೆ ಪಾದಯಾತ್ರೆ ನಡೆಸುತ್ತಿರುವ ಖ್ಯಾತ ಉದ್ಯಮಿ ಮುಕೇಶ್, ನೀತಾ ಅಂಬಾನಿ ಕಿರಿಯ ಪುತ್ರ ಹಾಗೂ ರಿಲಯನ್ಸ್ ಇಂಡಸ್ಟ್ರಿಸ್ ನಿರ್ದೇಶಕ ಅನಂತ್ ಅಂಬಾನಿ ಅವರು,ಮಾರಾಟಕ್ಕೆ ಕೊಂಡೊಯ್ಯುತ್ತದ್ದ ನೂರಾರು ಕೋಳಿಗಳನ್ನು ದುಪ್ಪಟ್ಟು ಹಣ ಕೊಟ್ಟು ಖರೀದಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ವಧೆಗಾಗಿ (ಹತ್ಯೆ) ಕೋಳಿಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆಗಟ್ಟಿದ್ದ ಅನಂತ್ ಅಂಬಾನಿ, ಕೋಳಿ ಮಾಲೀಕರು ಮತ್ತು ವಾಹನ ಚಾಲಕನ ಜೊತೆ ಮಾತುಕತೆ ನಡೆಸಿದ್ದಾರೆ. ಕೋಳಿಗಳ ಬೆಲೆಗಿಂತ ಎರಡು ಪಟ್ಟು ಬೆಲೆ ನೀಡಿ 250 ಕೋಳಿಗಳನ್ನು ರಕ್ಷಿಸಿದ್ದಾರೆ.
ಬಳಿಕ ಒಂದು ಕೋಳಿಯನ್ನು ಕೈಯಲ್ಲಿ ಹಿಡಿದುಕೊಂಡು ನಡೆಯುತ್ತಿರುವುದು ವಿಡಿಯೋದಲ್ಲಿದೆ. ಪಾದಯಾತ್ರೆಯ ವೇಳೆ ಕೋಳಿಗಳನ್ನು ರಕ್ಷಿಸಿರುವುದು ಅವರ ಪ್ರಾಣಿಗಳ ಮೇಲಿನ ಪ್ರೀತಿಯಾಗಿದೆ ಎಂದು ಟ್ವಿಟಿಗರು ಕೊಂಡಾಡುತ್ತಿದ್ದಾರೆ.
ಏಪ್ರಿಲ್ 10 ರಂದು ಅನಂತ್ ಅವರ ಜನ್ಮದಿನ. ಅದಕ್ಕಾಗಿ ಜಾಮ್ ನಗರದಿಂದ 140 ಕಿ. ಮೀ ದೂರದ ದ್ವಾರಕಾಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ಅನಂತ್, ಭದ್ರತೆ ಹಾಗೂ ಜನಸಾಮಾನ್ಯರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ರಾತ್ರಿ ಹೊತ್ತು ಪಾದಯಾತ್ರೆ ನಡೆಸುತ್ತಿದ್ದಾರೆ. Z+ ಭದ್ರತೆ ಮತ್ತು ಸ್ಥಳೀಯ ಪೋಲೀಸ್ ರಕ್ಷಣೆಯೊಂದಿಗೆ ಪ್ರತಿ ರಾತ್ರಿ 10 ರಿಂದ 12 ಕಿ.ಮೀ. ಪಾದಯಾತ್ರೆ ನಡೆಸುತ್ತಿದ್ದು, ಏಪ್ರಿಲ್ 10 ರಂದು ದ್ವಾರಕಾ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಕೃಷ್ಣನ ದರ್ಶನ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ.
ರಿಲಯನ್ಸ್ ಫೌಂಡೇಶನ್ ಜೊತೆಗೆ ರಿಲಯನ್ಸ್ ಇಂಡಸ್ಟ್ರಿಸ್ ಸ್ಥಾಪಿಸಿರುವ ಪ್ರಾಣಿಗಳ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರವು ಅನೇಕ ಪ್ರಾಣಿಗಳಿಗೆ ನೆಲೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ನಲ್ಲಿ ವಂತರಾವನ್ನು (Vantara) ಉದ್ಘಾಟಿಸಿದರು ಮತ್ತು ಪ್ರಾಣಿಗಳ ರಕ್ಷಣೆ ಮತ್ತು ಆರೈಕೆಯಲ್ಲಿ ಅನಂತ್ ಅವರ ಪ್ರಯತ್ನಗಳನ್ನು ಶ್ಲಾಘಿಸಿದ್ದರು.
Advertisement