
ಭೋಪಾಲ್: 'ನನ್ ಹೆಂಡ್ತಿ ಹೊಡೀತಾಳೆ.. ಹೊಡೆದು.. ಹೊಡೆದು ಕೊಂದು ಹಾಕ್ತಾಳೆ.. ದಯವಿಟ್ಟೂ ನನ್ನನ್ನು ಕಾಪಾಡಿ ಸರ್' ಎಂದು ರೈಲ್ವೆ ಉದ್ಯೋಗಿಯೊಬ್ಬರು ಪೊಲೀಸರ ಮೊರೆ ಹೋಗಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಪನ್ನಾದಲ್ಲಿ ಈ ಘಟನೆ ವರದಿಯಾಗಿದ್ದು, 30 ವರ್ಷದ ಲೋಕೋ ಪೈಲಟ್ ಲೋಕೇಶ್ ಮಾಂಝಿ, ತಮ್ಮ ಪತ್ನಿ ಹರ್ಷಿತಾ ರಾಯಕ್ವಾರ್ ವಿರುದ್ಧವೇ ಪೊಲೀಸ್ ದೂರು ನೀಡಿದ್ದಾರೆ.
ಅಲ್ಲದೆ ತಮ್ಮ ಮನೆಯಲ್ಲಿ ಪತ್ನಿ ಹಲ್ಲೆ ಮಾಡುತ್ತಿರುವ ಸಿಸಿಟಿವಿ ವಿಡಿಯೋವನ್ನೂ ಕೂಡ ಲೋಕೇಶ್ ಮಾಂಝಿ ಪೊಲೀಸರಿಗೆ ನೀಡಿದ್ದು ಕೂಡಲೇ ಆಕೆ ವಿರುದ್ಧ ಗೃಹ ಹಿಂಸೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ದೂರಿನಲ್ಲೇನಿದೆ?
ಜೂನ್ 2023ರಲ್ಲಿ ಲೋಕೇಶ್ ಮಾಂಝಿ ಮತ್ತು ಹರ್ಷಿತಾ ರಾಯ್ಕ್ವಾರ್ ಮದುವೆಯಾಗಿತ್ತು. ಆರಂಭದಲ್ಲಿ ಸರಿ ಇದ್ದ ಪತ್ನಿ ಬಳಿಕ ನಿಧಾನವಾಗಿ ತನ್ನ ವರಸೆ ತೋರಿಸಲಾರಂಭಿಸಿದಳು. ಮಾತು ಮಾತಿಗೂ ಸಿಟ್ಟು, ಕೋಪ ಮಾಡಿಕೊಂಡು ಇಡೀ ಕುಟುಂಬದ ಶಾಂತಿ ಹಾಳು ಮಾಡಿದಳು. ಮದುವೆಯಾದಾಗಿನಿಂದ ತಮ್ಮ ಪತ್ನಿ, ಅತ್ತೆ ಮತ್ತು ಭಾವ ಹಣ ಮತ್ತು ಆಭರಣಗಳಿಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಲೋಕೇಶ್ ಮಾಂಝಿ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.
ಅಂತೆಯೇ ನನ್ನ ಪತ್ನಿ ನಾನು ನನ್ನ ತಂದೆ-ತಾಯಿ ಕುಟುಂಬಸ್ಥರೊಂದಿಗೆ ಬೆರೆಯದಂತೆ ನಿರ್ಬಂಧಿಸುತ್ತಾಳೆ. ಸ್ನೇಹಿತರೊಂದಿಗೂ ಮಾತನಾಡಬಾರದು ಎಂದು ಹೇಳುತ್ತಾಳೆ. ಅವಳ ಮಾತು ಮೀರಿ ಅವರನ್ನು ಸಂಪರ್ಕಿಸಿದರೆ ಮನೆಗೆ ಬಂದ ಮೇಲೆ ಜಗಳ ಮಾಡುತ್ತಾಳೆ. ಜಗಳ ಮಾತ್ರವಲ್ಲ ಕೈಗೆ ಸಿಕ್ಕ ವಸ್ತುಗಳಿಂದ ಥಳಿಸುತ್ತಾಳೆ. ಇದಕ್ಕೆ ಪ್ರತಿರೋಧ ತೋರಿದರೆ ಗೃಹ ಹಿಂಸೆ ಮತ್ತು ವರದಕ್ಷಿಣ ಕಿರುಕುಳ ದೂರು ನೀಡುತ್ತೇನೆ ಎಂದು ಹೆದರಿಸುತ್ತಾಳೆ. ಮನೆಕೆಲಸಗಳಿಗೆ ಸಹಕರಿಸುವುದಿಲ್ಲ. ಏನೂ ಕೆಲಸ ಮಾಡುವುದಿಲ್ಲ. ದಯವಿಟ್ಟು ನನಗೆ ಸಹಾಯ ಮಾಡಿ ಸರ್ ಎಂದು ಲೋಕೇಶ್ ಮಾಂಝಿ ಪೊಲೀಸರ ಬಳಿ ನೆರವು ಕೋರಿದ್ದಾರೆ.
ಮಗುವನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ
ಇನ್ನು ಈ ವಿಚಾರವನ್ನು ಪೊಲೀಸರಿಗೆ ಹೇಳಿದರೆ ಅಥವಾ ಪೊಲೀಸರ ಸಂಪರ್ಕಿಸಿದರೆ ತಮ್ಮ ಮಗುವನ್ನೂ ಕೊಂದು ತಾನೂ ಕೂಡ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಒಮ್ಮೆ ಇದೇ ವಿಚಾರವಾಗಿ ಜಗಳವಾದಾಗ ಸೊಳ್ಳೆ ಔಷಧಿ ಕುಡಿದಿದ್ದಳು. ಅವಳ ಇಂತಹ ಕೃತ್ಯಗಳಿಂದ ನನಗೆ ಭಯವಾಗುತ್ತದೆ. ಹೀಗಾಗಿ ನಾನು ಇಷ್ಟು ದಿನ ಸುಮ್ಮನಿದ್ದೆ. ಇದೀಗ ಅವಳ ಕಿರುಕುಳ ಅತಿಯಾಗಿದ್ದು ಕೊನೆ ದಾರಿ ಇಲ್ಲದೇ ನಿಮ್ಮ ಸಹಾಯ ಕೋರುತ್ತಿದ್ದೇನೆ ಎಂದು ಲೋಕೇಶ್ ಮಾಂಝಿ ದೂರಿನಲ್ಲಿ ಹೇಳಿದ್ದಾರೆ.
ವೈರಲ್ ವಿಡಿಯೋ
ಇನ್ನು ಸಂತ್ರಸ್ಥ ಲೋಕೇಶ್ ಮಾಂಝಿ ತಮ್ಮ ಎಲ್ಲ ಆರೋಪಗಳಿಗೂ ಸಾಕ್ಷಿ ಕೂಡ ಇಟ್ಟುಕೊಂಡಿದ್ದು, ಮನೆಯಲ್ಲಿದ್ದ ಸಿಸಿಟಿವಿ ವಿಡಿಯೋಗಳನ್ನು ಪೊಲೀಸರಿಗೆ ನೀಡಿದ್ದಾರೆ. ವಿಡಿಯೋದಲ್ಲಿ ಪತ್ನಿ ಹರ್ಷಿತಾ ಪತಿ ಲೋಕೇಶ್ ಮೇಲೆ ಹಲ್ಲೆ ಮಾಡುತ್ತಿರುವುದು ಸ್ಪಷ್ಟವಾಗಿದೆ. ಅಲ್ಲದೆ ಇದನ್ನು ತಡೆಯಲು ಬಂದ ಮಹಿಳೆ ಮೇಲೂ ಆಕೆ ಹಲ್ಲೆಗೆ ಮುಂದಾಗಿರುವುದು ದಾಖಲಾಗಿದೆ. ಮಹಿಳೆ ಮುಂದೆಯೇ ಪತಿ ಲೋಕೇಶ್ ಮುಖಕ್ಕೇ ಒದೆಯುತ್ತಾಳೆ ಎಂದು ಲೋಕೇಶ್ ಮಾಂಝಿ ಆರೋಪಿಸಿದ್ದಾರೆ.
ದೂರು ದಾಖಲು, ತನಿಖೆ ಜಾರಿ
ಇನ್ನು ಪೊಲೀಸ್ ವರಿಷ್ಠಾಧಿಕಾರಿ ಸಾಯಿ ಕೃಷ್ಣ ಎಸ್ ತೋಟಾ ದೂರು ಮತ್ತು ವೀಡಿಯೊ ಪುರಾವೆಗಳನ್ನು ಸ್ವೀಕರಿಸಿರುವುದಾಗಿ ದೃಢಪಡಿಸಿದ್ದಾರೆ. ಆಪಾದಿತ ಘಟನೆಗಳು ಸತ್ನಾದಲ್ಲಿ ನಡೆದಿರುವುದರಿಂದ, ಪ್ರಕರಣವನ್ನು ತನಿಖೆಗಾಗಿ ಸತ್ನಾ ಪೊಲೀಸರಿಗೆ ವರ್ಗಾಯಿಸಲಾಗಿದೆ ಎಂದು ಹೇಳಿದ್ದಾರೆ.
Advertisement