ಹೈದರಾಬಾದ್ ಕೇಂದ್ರೀಯ ವಿವಿ ಬಳಿ ಅರಣ್ಯ ಭೂಮಿ ತೆರವಿಗೆ ತೆಲಂಗಾಣ ಹೈಕೋರ್ಟ್ ತಡೆ

ತೆಲಂಗಾಣ ಸರ್ಕಾರ ಜೂನ್ 26, 2024 ರಂದು ಹೊರಡಿಸಿದ್ದ ಸರ್ಕಾರಿ ಆದೇಶ(ಜಿಒ) 54ರ ಅನುಷ್ಠಾನ ಪ್ರಶ್ನಿಸಿ ಹಲವು ಪಿಐಎಲ್‌ಗಳನ್ನು ಸಲ್ಲಿಸಲಾಗಿತ್ತು.
ಅರಣ್ಯ ನಾಶ ವಿರೋಧಿಸಿ ಪ್ರತಿಭಟನೆ
ಅರಣ್ಯ ನಾಶ ವಿರೋಧಿಸಿ ಪ್ರತಿಭಟನೆ
Updated on

ಹೈದರಾಬಾದ್: ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿ(ಎಚ್‌ಸಿಯು) ಬಳಿ 400 ಎಕರೆ ಕಾಂಚ ಗಚಿಬೌಲಿ ಪ್ರದೇಶದ ಅರಣ್ಯ ನಾಶ ವಿರೋಧಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ತೆಲಂಗಾಣ ಹೈಕೋರ್ಟ್, ಭೂಮಿ ತೆರವು ಕಾರ್ಯವನ್ನು ಸ್ಥಗಿತಗೊಳಿಸಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸುಜೋಯ್ ಪಾಲ್ ಮತ್ತು ನ್ಯಾಯಮೂರ್ತಿ ರೇಣುಕಾ ಯಾರಾ ಅವರನ್ನೊಳಗೊಂಡ ವಿಭಾಗೀಯ ಪೀಠ, ಭೂ-ತೆರವು ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಆದೇಶಿಸಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ(ಪಿಐಎಲ್) ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.

ತೆಲಂಗಾಣ ಸರ್ಕಾರ ಜೂನ್ 26, 2024 ರಂದು ಹೊರಡಿಸಿದ್ದ ಸರ್ಕಾರಿ ಆದೇಶ(ಜಿಒ) 54ರ ಅನುಷ್ಠಾನ ಪ್ರಶ್ನಿಸಿ ಹಲವು ಪಿಐಎಲ್‌ಗಳನ್ನು ಸಲ್ಲಿಸಲಾಗಿತ್ತು.

ತೆಲಂಗಾಣ ಸರ್ಕಾರ, ಹಲವು ಮೂಲಸೌಕರ್ಯ ಮತ್ತು ಐಟಿ ಪಾರ್ಕ್‌ಗಳ ಅಭಿವೃದ್ಧಿಗಾಗಿ ತೆಲಂಗಾಣ ಕೈಗಾರಿಕಾ ಮೂಲಸೌಕರ್ಯ ನಿಗಮ ಲಿಮಿಟೆಡ್(ಟಿಜಿಐಐಸಿ)ಗೆ 400 ಎಕರೆ ಭೂಮಿ ಹಂಚಿಕೆ ಮಾಡಲು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪರಿಸರವಾದಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರಣ್ಯ ನಾಶ ವಿರೋಧಿಸಿ ಪ್ರತಿಭಟನೆ
ಕಾಂಚ ಗಚಿಬೌಲಿ: ಐಟಿ ಪಾರ್ಕ್ ಸ್ಥಾಪನೆಗೆ ಅರಣ್ಯ ನಾಶ ವಿರೋಧಿಸಿ ಪ್ರತಿಭಟನೆ; ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಎಸ್. ನಿರಂಜನ್ ರೆಡ್ಡಿ ಮತ್ತು ಎಲ್. ರವಿಚಂದ್ರ, ಈ ಭೂಮಿ ಮೀಸಲು ಅರಣ್ಯದ ಭಾಗವಾಗಿದ್ದು, ಅಳಿವಿನಂಚಿನಲ್ಲಿರುವ ಪ್ರಭೇದಗಳು ಸೇರಿದಂತೆ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ನ ಪೂರ್ವನಿದರ್ಶನಗಳನ್ನು ಉಲ್ಲೇಖಿಸಿ, ಅರಣ್ಯ ಭೂಮಿಯನ್ನು ಸರ್ಕಾರಿ ದಾಖಲೆಗಳಿಗಿಂತ ಅದರ ಪರಿಸರ ಗುಣಲಕ್ಷಣಗಳಿಂದ ಗುರುತಿಸಬೇಕು ಎಂದು ವಾದಿಸಿದರು. ಅರ್ಜಿದಾರರು ಈ ಪ್ರದೇಶದಲ್ಲಿ ಎರಡು ಸರೋವರಗಳು, 'ಮಶ್ರೂಮ್ ರಾಕ್' ನಂತಹ ವಿಶಿಷ್ಟ ಶಿಲಾ ರಚನೆಗಳು ಮತ್ತು ಚುಕ್ಕೆ ಜಿಂಕೆ, ಕಾಡುಹಂದಿಗಳು, ನಕ್ಷತ್ರ ಆಮೆಗಳು ಹಾಗೂ ಹೆಬ್ಬಾವುಗಳಂತಹ ಪ್ರಭೇದಗಳಿವೆ ಎಂದು ಎತ್ತಿ ತೋರಿಸಿದರು.

30–40 ಜೆಸಿಬಿ ಅಗೆಯುವ ಯಂತ್ರಗಳನ್ನು ಬಳಸಿಕೊಂಡು ಅರಣ್ಯನಾಶಕ್ಕೆ ಅವಕಾಶ ನೀಡುವ ಮೊದಲು ಸರ್ಕಾರ, ತಜ್ಞರ ಸಮಿತಿ ರಚಿಸಲು ವಿಫಲವಾಗಿದೆ ಮತ್ತು ಪರಿಸರ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಅರ್ಜಿದಾರರು ಆರೋಪಿಸಿದರು.

ಇನ್ನು ಸರ್ಕಾರದ ಪರವಾಗಿ ವಾದಿಸಿದ ಅಡ್ವೊಕೇಟ್ ಜನರಲ್ ಎ. ಸುದರ್ಶನ್ ರೆಡ್ಡಿ ಅವರು, ಈ ಭೂಮಿಯನ್ನು ಅರಣ್ಯ ಭೂಮಿ ಎಂದು ವರ್ಗೀಕರಿಸಲಾಗಿಲ್ಲ ಮತ್ತು ಕೈಗಾರಿಕಾ ಬಳಕೆಗೆ ಗೊತ್ತುಪಡಿಸಲಾಗಿದೆ ಎಂದು ಹೇಳಿದರು. ನಿಜಾಮರ ಕಾಲದಲ್ಲಿ 'ಕಾಂಚ ಭೂಮಿ' ಎಂದು ಕರೆಯಲ್ಪಡುತ್ತಿದ್ದ ಈ ಭೂಮಿಯನ್ನು 2003 ರಲ್ಲಿ ಅಭಿವೃದ್ಧಿ ಉದ್ದೇಶಗಳಿಗಾಗಿ ಐಎಂಜಿ ಭರತ ಅವರಿಗೆ ಹಂಚಿಕೆ ಮಾಡಲಾಗಿತ್ತು ಎಂದು ಐತಿಹಾಸಿಕ ದಾಖಲೆಗಳನ್ನು ಉಲ್ಲೇಖಿಸಿದರು. ಪಕ್ಕದ ಪ್ರದೇಶಗಳಲ್ಲಿನ ಎತ್ತರದ ಕಟ್ಟಡಗಳ ಉಪಸ್ಥಿತಿಯನ್ನು ಉಲ್ಲೇಖಿಸಿ, ಈ ಪ್ರದೇಶವು ಮೀಸಲು ಅರಣ್ಯಕ್ಕೆ ಅರ್ಹತೆ ಹೊಂದಿದೆ ಎಂಬ ಅರ್ಜಿದಾರರ ಹೇಳಿಕೆಯನ್ನು ತಳ್ಳಿಹಾಕಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com