
ನವದೆಹಲಿ: ಸಂಸತ್ತಿನಲ್ಲಿ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ವಕ್ಫ್ (ತಿದ್ದುಪಡಿ) ಮಸೂದೆ, 2025 ರ ಸಾಂವಿಧಾನಿಕತೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಶೀಘ್ರದಲ್ಲೇ ಪ್ರಶ್ನಿಸಲಾಗುವುದು ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.
ವಕ್ಫ್ (ತಿದ್ದುಪಡಿ) ಮಸೂದೆಗೆ ಸುದೀರ್ಘ ಚರ್ಚೆ ನಂತರ ರಾಜ್ಯಸಭೆಯಲ್ಲಿ ಕೂಡ ಅನುಮೋದನೆ ಸಿಕ್ಕಿ ಸಂಸತ್ತು ಅಂಗೀಕರಿಸಿದೆ. ಈ ಬಗ್ಗೆ ಎಕ್ಸ್ ಪೋಸ್ಟ್ ನಲ್ಲಿ ಪ್ರತಿಕ್ರಿಯಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಕಾಂಗ್ರೆಸ್ ಪಕ್ಷ ಶೀಘ್ರದಲ್ಲೇ ವಕ್ಫ್ (ತಿದ್ದುಪಡಿ) ಮಸೂದೆ, 2024 ರ ಸಾಂವಿಧಾನಿಕತೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಿದೆ ಎಂದು ಹೇಳಿದ್ದಾರೆ.
ಭಾರತದ ಸಂವಿಧಾನದಲ್ಲಿರುವ ತತ್ವಗಳು, ನಿಬಂಧನೆಗಳು ಮತ್ತು ಅಭ್ಯಾಸಗಳ ಮೇಲೆ ಮೋದಿ ಸರ್ಕಾರ ದಾಳಿ ನಡೆಸುತ್ತಿದ್ದು ಅದನ್ನು ನಾವು ವಿರೋಧಿಸುತ್ತೇವೆ. ಸಿಎಎ, 2019 ರ ಕುರಿತು ಕಾಂಗ್ರೆಸ್ ಸವಾಲನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಆರ್‌ಟಿಐ ಕಾಯ್ದೆ, 2005ಕ್ಕೆ 2019 ರಲ್ಲಿ ತಂದ ತಿದ್ದುಪಡಿಗಳ ಕುರಿತು ಕಾಂಗ್ರೆಸ್ ನ ಸವಾಲನ್ನು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಚುನಾವಣಾ ನಿಯಮ 2024ಕ್ಕೆ ತಿದ್ದುಪಡಿಗಳ ಸಿಂಧುತ್ವವನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಪೂಜಾ ಸ್ಥಳಗಳ ಕಾಯ್ದೆ, 1991ನ್ನು ಎತ್ತಿಹಿಡಿಯಲು ಕಾಂಗ್ರೆಸ್ ಸಲ್ಲಿಸಿರುವ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ, ವಕ್ಫ್ ತಿದ್ದುಪಡಿ ಮಸೂದೆಯನ್ನು ಕೂಡ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುತ್ತೇವೆ ಎಂದು ಜೈರಾಂ ರಮೇಶ್ ಹೇಳಿದ್ದಾರೆ.
Advertisement