
ನವದೆಹಲಿ: ಸುದೀರ್ಘ 12 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಬಿಸಿಬಿಸಿ ಚರ್ಚೆ ಮತ್ತು ವಿರೋಧ ಪಕ್ಷಗಳ ತೀವ್ರ ವಿರೋಧ ನಡುವೆ ರಾಜ್ಯಸಭೆಯು ವಕ್ಫ್ (ತಿದ್ದುಪಡಿ) ಮಸೂದೆ, 2025 ನ್ನು ಅಂಗೀಕರಿಸಿತು.
ರಾಜ್ಯಸಭೆಯಲ್ಲಿ, ಮಸೂದೆಯ ಪರವಾಗಿ 128 ಮತಗಳು ಮತ್ತು ವಿರೋಧವಾಗಿ 95 ಮತಗಳು ಚಲಾವಣೆಯಾದವು. ವಕ್ಫ್ ಮಂಡಳಿಗೆ ತಿದ್ದುಪಡಿ ತರಲು ಕೋರುವ ಮಸೂದೆಯು ಮುಸಲ್ಮಾನ ಸಮುದಾಯಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ ಬದಲಿಗೆ ಅವರಿಗೆ ಇನ್ನಷ್ಟು ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ತಿದ್ದುಪಡಿ ಮಸೂದೆ ಬಗ್ಗೆ ನಿನ್ನೆ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಚರ್ಚೆ ಆರಂಭವಾಗಿ ಇಂದು ನಸುಕಿನ ಜಾವದವರೆಗೆ ರಾಜ್ಯಸಭೆಯಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಸತತ ಚರ್ಚೆಗಳು ನಡೆದವು. ರಾಜ್ಯಸಭೆಯಲ್ಲಿ ಮಸೂದೆಯನ್ನು ಅಂಗೀಕಾರಕ್ಕಾಗಿ ಮಂಡಿಸುವ ಮೊದಲು, ವಕ್ಫ್ ಆಸ್ತಿಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಲಾಗಿಲ್ಲ ಎಂದು ರಿಜಿಜು ಒತ್ತಿ ಹೇಳಿದರು.
ವಕ್ಫ್ ಮಂಡಳಿ ಯಾವಾಗಲೂ ಹಾಗೆಯೇ ಇರುತ್ತದೆ. ವಕ್ಫ್ ಮಂಡಳಿಯು ಶಾಸನಬದ್ಧ ಸಂಸ್ಥೆಯಾಗಿದ್ದು, ಮುಸ್ಲಿಮರನ್ನು ಮಾತ್ರ ಶಾಸನಬದ್ಧ ಸಂಸ್ಥೆಯಲ್ಲಿ ಏಕೆ ಸೇರಿಸಬೇಕು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ವಿವಾದವಿದ್ದರೆ, ಆ ವಿವಾದವನ್ನು ಹೇಗೆ ಪರಿಹರಿಸಲಾಗುತ್ತದೆ ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರೊಂದಿಗೆ ವಿವಾದಗಳೂ ಇರಬಹುದಲ್ಲವೇ ಎಂದು ಕೇಳಿದರು.
ಶಾಸನಬದ್ಧ ಸಂಸ್ಥೆಯು ಎಲ್ಲಾ ಧರ್ಮಗಳ ಪ್ರತಿನಿಧಿಗಳನ್ನು ಒಳಗೊಂಡ ಜಾತ್ಯತೀತ ಸಂಸ್ಥೆಯಾಗಿರಬೇಕು ಎಂದು ರಿಜಿಜು ವಾದಿಸಿದರು. ನಂತರ ಮಸೂದೆಯನ್ನು ರಾಜ್ಯಸಭೆಯಲ್ಲಿ ಷರತ್ತು-ಅನುಬಂಧದ ಆಧಾರದ ಮೇಲೆ ಮತಕ್ಕೆ ಹಾಕಲಾಯಿತು.
ಇದಕ್ಕೂ ಮೊದಲು, ಕೇಂದ್ರ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಅಂಗೀಕಾರವಾಗಿದ್ದ ವಕ್ಫ್ (ತಿದ್ದುಪಡಿ) ಮಸೂದೆ 2025 ನ್ನು ರಾಜ್ಯಸಭೆಯಲ್ಲಿ ಮಂಡಿಸಿದರು, ಆಡಳಿತಾರೂಢ ಎನ್‌ಡಿಎ ಈ ಶಾಸನವನ್ನು ಅಲ್ಪಸಂಖ್ಯಾತರಿಗೆ ಪ್ರಯೋಜನಕಾರಿ ಎಂದು ಸಮರ್ಥಿಸಿಕೊಂಡರೆ, ಪ್ರತಿಪಕ್ಷಗಳು ಇದನ್ನು ಮುಸ್ಲಿಂ ವಿರೋಧಿ ಎಂದು ಕರೆದವು.
ಲೋಕಸಭೆಯಲ್ಲಿ, ವಿರೋಧ ಪಕ್ಷದ ಸದಸ್ಯರು ತಂದ ಎಲ್ಲಾ ತಿದ್ದುಪಡಿಗಳನ್ನು ಧ್ವನಿ ಮತಗಳಿಂದ ತಿರಸ್ಕರಿಸಿದ ನಂತರ ಮಸೂದೆಯನ್ನು ಅಂಗೀಕರಿಸಲಾಯಿತು. ಮತಗಳ ವಿಭಜನೆಯಲ್ಲಿ 288 ಸದಸ್ಯರು ಪರವಾಗಿ ಮತ್ತು 232 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದ್ದರು.
ಸಾಮಾಜಿಕ-ಆರ್ಥಿಕ ನ್ಯಾಯಕ್ಕಾಗಿ ಮಹತ್ವದ ಐತಿಹಾಸಿಕ ಕ್ಷಣ-ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು, ಸಂಸತ್ತಿನಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ ಅಂಗೀಕಾರ ಕ್ಷಣವನ್ನು ಸಾಮಾಜಿಕ-ಆರ್ಥಿಕ ನ್ಯಾಯ, ಪಾರದರ್ಶಕತೆ ಮತ್ತು ಸಮಗ್ರ ಬೆಳವಣಿಗೆಗಾಗಿ ದೇಶದ ಸಾಮೂಹಿಕ ಅನ್ವೇಷಣೆಯಲ್ಲಿ "ಒಂದು ಮಹತ್ವದ ಕ್ಷಣ" ಎಂದು ಬಣ್ಣಿಸಿದ್ದಾರೆ.
ಈ ಕುರಿತು ಎಕ್ಸ್ ಪೋಸ್ಟ್ ನಲ್ಲಿ ಪ್ರತಿಕ್ರಿಯಿಸಿರುವ ಅವರು, ದಶಕಗಳಿಂದ ವಕ್ಫ್ ವ್ಯವಸ್ಥೆಯು ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕೊರತೆ ಎದುರಿಸುತ್ತಿತ್ತು. ವಿಶೇಷವಾಗಿ ಮುಸಲ್ಮಾನ ಮಹಿಳೆಯರು, ಬಡ ಮುಸಲ್ಮಾನರು ಮತ್ತು ಪಸ್ಮಾಂಡ ಮುಸಲ್ಮಾನರ ಹಿತಾಸಕ್ತಿಗಳಿಗೆ ಹಾನಿ ಮಾಡುತ್ತದೆ ಎಂದು ಹೇಳಿದ್ದಾರೆ.
ವಕ್ಫ್ (ತಿದ್ದುಪಡಿ) ಮಸೂದೆ ಮತ್ತು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆಯನ್ನು ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿರುವುದು ಸಾಮಾಜಿಕ-ಆರ್ಥಿಕ ನ್ಯಾಯ, ಪಾರದರ್ಶಕತೆ ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆಗಾಗಿ ನಮ್ಮ ಸಾಮೂಹಿಕ ಅನ್ವೇಷಣೆಯಲ್ಲಿ ಒಂದು ಮಹತ್ವದ ಕ್ಷಣವಾಗಿದೆ ಎಂದು ಹೇಳಿದ್ದಾರೆ.
ಸಂಸತ್ತು ಅಂಗೀಕರಿಸಿದ ಶಾಸನಗಳು ಪಾರದರ್ಶಕತೆಯನ್ನು ಹೆಚ್ಚಿಸುತ್ತವೆ, ಜನರ ಹಕ್ಕುಗಳನ್ನು ರಕ್ಷಿಸುತ್ತವೆ. ಭಾರತವು ಈಗ ಆಧುನಿಕ ಮತ್ತು ಸಾಮಾಜಿಕ ನ್ಯಾಯಕ್ಕೆ ಸೂಕ್ಷ್ಮವಾಗಿರುವ ಯುಗವನ್ನು ಪ್ರವೇಶಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಒಟ್ಟಾರೆಯಾಗಿ ಹೇಳುವುದಾದರೆ, ಪ್ರತಿಯೊಬ್ಬ ನಾಗರಿಕನ ಘನತೆಗೆ ಆದ್ಯತೆ ನೀಡಲು ನಾವು ಬದ್ಧರಾಗಿದ್ದೇವೆ. ಈ ರೀತಿಯಾಗಿ ನಾವು ಬಲವಾದ, ಎಲ್ಲರನ್ನೂ ಒಳಗೊಂಡ ಮತ್ತು ಹೆಚ್ಚು ಸಹಾನುಭೂತಿಯ ಭಾರತವನ್ನು ನಿರ್ಮಿಸುತ್ತೇವೆ ಎಂದಿದ್ದಾರೆ.
ಲೋಕಸಭೆಯು ವಿವಾದಾತ್ಮಕ ಕರಡು ಕಾನೂನನ್ನು ಅಂಗೀಕರಿಸಿದ ಒಂದು ದಿನದ ನಂತರ, ರಾಜ್ಯಸಭೆಯು ನಿನ್ನೆ ರಾತ್ರಿ ಮಸೂದೆಯನ್ನು ಅಂಗೀಕರಿಸಿತು.
Advertisement