
ನವದೆಹಲಿ: ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯ ಬಜೆಟ್ ಅಧಿವೇಶನದ ಕಲಾಪ ಶುಕ್ರವಾರ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ.
ಲೋಕಸಭೆ ದಿನದ ಸಭೆ ಸೇರಿದ ತಕ್ಷಣ, ಸರ್ಕಾರದ ವಿರುದ್ಧ ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದ ವಿಚಾರ ಪ್ರಸ್ತಾಪವಾಯಿತು. ಈ ವೇಳೆ ಆಡಳಿತಾರೂಢ ಪಕ್ಷದ ಸದಸ್ಯರಿಂದ "ಸೋನಿಯಾ ಗಾಂಧಿ ಮಾಫಿ ಮಾಂಗೊ" (ಸೋನಿಯಾ ಗಾಂಧಿ ಕ್ಷಮೆಯಾಚಿಸಿ) ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಇದೇ ವೇಳೆ ವಿರೋಧ ಪಕ್ಷಗಳ ಸದಸ್ಯರು ಕೂಡ ಘೋಷಣೆ ಕೂಗಲು ಆರಂಭಿಸಿದರು.
ತೀವ್ರ ಗದ್ದಲ ಹಿನ್ನೆಲೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಿದರು. ಮತ್ತೆ ಕಲಾಪ ಆರಂಭವಾದಾಗಲೂ ಗದ್ದಲ ಮುಂದುವರೆದ ಹಿನ್ನೆಲೆಯಲ್ಲಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಸಂವಿಧಾನ ಸದನದ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಪಕ್ಷದ ಸಂಸದರನ್ನು ಉದ್ದೇಶಿಸಿ ಮಾತನಾಡಿದ್ದ ಸೋನಿಯಾ ಗಾಂಧಿಯವರು, ವಕ್ಫ್ ತಿದ್ದುಪಡಿ ಮಸೂದೆ ದೇಶದ ಸಂವಿಧಾನದ ಮೇಲಿನ ‘ನಿರ್ಲಜ್ಜ ದಾಳಿ’ ಎಂದು ಟೀಕಿಸಿದ್ದರು.
ಇದು ಸಮಾಜವನ್ನು ಶಾಶ್ವತವಾಗಿ ಧ್ರುವೀಕರಣ ಸ್ಥಿತಿಯಲ್ಲಿಡಲು ಬಿಜೆಪಿ ಹೆಣೆದ ಉದ್ದೇಶಪೂರ್ವಕ ಕಾರ್ಯತಂತ್ರದ ಭಾಗವಾಗಿದೆ. ಒಂದು ದೇಶ, ಒಂದು ಚುನಾವಣೆ (ಒಎನ್‌ಒಇ) ಮಸೂದೆ ಕೂಡ ಸಂವಿಧಾನದ ಮೇಲಿನ ಮತ್ತೊಂದು ವಿಧ್ವಂಸಕ ದಾಳಿ. ಪಕ್ಷ ಇದನ್ನು ಬಲವಾಗಿ ವಿರೋಧಿಸುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿಗಳಿಗೆ ಸೇರಿದ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ನೀಡಬೇಕೆಂಬ ಬೇಡಿಕೆಯೊಂದಿಗೆ ಸಂಸತ್ತು ಅಂಗೀಕರಿಸಿದ ಮಹಿಳಾ ಮೀಸಲಾತಿ ಮಸೂದೆಯ ಅನುಷ್ಠಾನವನ್ನು ಸರ್ಕಾರ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ್ದರು.
ಭಾರತವನ್ನು ಕಣ್ಗಾವಲಿನ ರಾಷ್ಟ್ರವನ್ನಾಗಿ ಮಾಡಲು ಹೊರಟಿರುವ ಉದ್ದೇಶವನ್ನು ಮತ್ತು ಮೋದಿ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ತೆರೆದಿಡುವುದು ಹಾಗೂ ನ್ಯಾಯಕ್ಕಾಗಿ ಸರಿಯಾದ ಹೋರಾಟ ನಡೆಸುವುದು ಅತ್ಯಗತ್ಯವಾಗಿದೆ. ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರಿಗೆ ಸಂಸತ್‌ನಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ. ಸಮಸ್ಯೆಗಳ ಬಗ್ಗೆ ಕಾಂಗ್ರೆಸ್‌ಗೆ ದನಿ ಎತ್ತಲು ಅವಕಾಶ ನೀಡದಿರಲು ಆಡಳಿತಾರೂಢ ಪಕ್ಷಗಳು ಆಗಾಗ್ಗೆ ಗೊಂದಲವನ್ನು ಸೃಷ್ಟಿಸುತ್ತಿವೆ ಎಂದು ಆರೋಪಿಸಿದ್ದರು.
ಇನ್ನು ರಾಜ್ಯಸಭೆಯ ಕಲಾಪವನ್ನೂ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ರಾಜ್ಯಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ಪಶ್ಚಿಮ ಬಂಗಾಳದಲ್ಲಿ 25,700 ಕ್ಕೂ ಹೆಚ್ಚು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿಯನ್ನು ಸುಪ್ರೀಂ ಕೋರ್ಟ್ ಅಮಾನ್ಯಗೊಳಿಸಿರುವ ಕುರಿತು ತೀವ್ರ ಗದ್ದಲವುಂಟಾಗಿದ್ದು, ಕಲಾಪವನ್ನು ಮಧ್ಯಾಹ್ನ 1 ಗಂಟೆಯವರೆಗೆ ಮುಂದೂಡಲಾಗಿತ್ತು.
ಕಲಾಪ ಆರಂಭವಾಗುತ್ತಿದ್ದಂತೆಯೇ ಜಗದೀಪ್ ಧನಕರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಲಾಯಿತು. ಬಳಿಕ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿ ವಿಚಾರವನ್ನು ಪ್ರಸ್ತಾಪಿಸಿದ ಸದಸ್ಯರು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು.
ಆಡಳಿತ ಪಕ್ಷವು ಈ ವಿಷಯವನ್ನು ಎತ್ತಿದಾಗ ಟಿಎಂಸಿಯ ಡೆರೆಕ್ ಒ'ಬ್ರೇನ್ ಪ್ರತಿಕ್ರಿಯಿಸಲು ಪ್ರಯತ್ನಿದರು. ಈ ವೇಳೆ ಗದ್ದಲ ಉಂಟಾಯಿತು, ಬಳಿಕ ಜಗದೀಪ್ ಧನಕರ್ ಅವರು ಮಧ್ಯಾಹ್ನ 12 ಗಂಟೆಗೆ, ನಂತರ ಮಧ್ಯಾಹ್ನ 1 ಗಂಟೆಗೆ ಕಲಾಪವನ್ನು ಮುಂದೂಡಿದರು.
ಇಜೇ ವೇಳೆ ಸೋನಿಯಾ ಗಾಂಧಿಯವರ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ಸಂಸತ್ತಿನ ಹಿರಿಯ ಸದಸ್ಯರು ಇಂತಹ ಆರೋಪಗಳನ್ನು ಮಾಡಿದಾಗ, ಅದು ಸಂಸದೀಯ ಪ್ರಕ್ರಿಯೆಯ ವಿಶ್ವಾಸಾರ್ಹತೆ ಮತ್ತು ಘನತೆಯನ್ನು ಹಾಳು ಮಾಡುತ್ತದೆ. ಸದನದ ಕಲಾಪಗಳ ಸಮಗ್ರತೆಯನ್ನು ಪ್ರಶ್ನಿಸುವ ಅಂತಹ ಹೇಳಿಕೆಗಳು ಸೂಕ್ತವಲ್ಲ ಎಂದು ಹೇಳಿದರು.
ಈ ಹೇಳಿಕೆಗೆ ವಿರೋಧ ಪಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗಲು ಆರಂಭಿಸಿದರು. ತೀವ್ರ ಗದ್ದಲ ಹಿನ್ನೆಲೆಯಲ್ಲಿ ಬಳಿಕ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ: ನಿರ್ಣಯ ಅಂಗೀಕಾರ
ಇನ್ನು ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ನಿರ್ಣಯವನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಿಲಾಗಿದೆ.
ಪಕ್ಷಾತೀತ ಸದಸ್ಯರು ಈ ನಿರ್ಧಾರವನ್ನು ಬೆಂಬಲಿಸಿದರೆ, ರಾಜ್ಯದಲ್ಲಿ (ಮಣಿಪುರ) ಕಾನೂನು ಸುವ್ಯವಸ್ಥೆ ಮರುಸ್ಥಾಪಿಸಲು ಮತ್ತು ಹಿಂಸಾಚಾರವನ್ನು ತಡೆಯಲು ಕೇಂದ್ರ ವಿಫಲವಾಗಿದೆ ಎಂದು ವಿರೋಧ ಪಕ್ಷದ ಸದಸ್ಯರು ಟೀಕಿಸಿದರು.
ಬಳಿಕ ನಿರ್ಣಯದ ಮೇಲಿನ ಚರ್ಚೆಯ ಕೊನೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಣಿಪುರದಲ್ಲಿ ಕಾದಾಡುತ್ತಿರುವ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಸಂಘರ್ಷಕ್ಕೆ ಶೀಘ್ರ ಪರಿಹಾರ ದೊರೆಯುವ ಭರವಸೆ ವ್ಯಕ್ತಪಡಿಸಿದರು.
ಶಾಂತಿಯುತ ಪರಿಹಾರಕ್ಕಾಗಿ ಎರಡೂ ಸಮುದಾಯಗಳೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದರು.
ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಈಗಾಗಲೇ ಎರಡು ಸಭೆಗಳು ನಡೆದಿವೆ. ಮೂರನೇ ಸಭೆ ಶೀಘ್ರದಲ್ಲೇ ನವದೆಹಲಿಯಲ್ಲಿ ನಡೆಯಲಿದೆ. ರಾಜ್ಯದಲ್ಲಿ ಸಹಜ ಸ್ಥಿತಿ ಮರಳಿ ತರಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಮಾಹಿತಿ ನೀಡಿದರು.
Advertisement