
ಚೆನ್ನೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರನ್ನು 'ದೇಶದ್ರೋಹಿ' ಎಂದು ಕರೆದು ವಿವಾದಕ್ಕೆ ಸಿಲುಕಿರುವ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಅವರಿಗೆ ನೀಡಲಾಗಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನನ್ನು ಏಪ್ರಿಲ್ 17ರವರೆಗೆ ಮದ್ರಾಸ್ ಹೈಕೋರ್ಟ್ ಸೋಮವಾರ ವಿಸ್ತರಿಸಿದೆ.
ಸಂಬಂಧಪಟ್ಟ ನ್ಯಾಯಾಲಯಗಳನ್ನು ಸಂಪರ್ಕಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ನ್ಯಾಯಮೂರ್ತಿ ಸುಂದರ್ ಮೋಹನ್ ಅವರು ಅರ್ಜಿದಾರರಾದ ಕಾಮ್ರಾ ಅವರಿಗೆ ಸೂಚಿಸಿದ್ದಾರೆ.
ಸೋಮವಾರ ಪ್ರಕರಣದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ವಿ ಸುರೇಶ್, ಮಹಾರಾಷ್ಟ್ರದಲ್ಲಿ ಅರ್ಜಿದಾರರ ವಿರುದ್ಧ ಇನ್ನೂ ಮೂರು ಎಫ್‌ಐಆರ್‌ಗಳು ದಾಖಲಾಗಿವೆ ಎಂದು ತಿಳಿಸಿದರು.
ಅಧಿಕಾರಿಗಳು ಮುಂಬೈನಲ್ಲಿರುವ ಅವರ ಪೋಷಕರ ಮನೆಗೆ ಭೇಟಿ ನೀಡಿ ಅವರ ವೃದ್ಧ ಪೋಷಕರಿಗೆ ತೊಂದರೆ ಉಂಟುಮಾಡಿದ್ದಾರೆ. ಅರ್ಜಿದಾರರ ಮೇಲಿನ ದ್ವೇಷ ಇನ್ನೂ ಮುಂದುವರೆದಿದೆ. ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರನ್ನು ಸಹ ಪೊಲೀಸರು ಕರೆಸಿದ್ದಾರೆ ಎಂದು ಸುರೇಶ್ ಹೇಳಿದರು.
ನ್ಯಾಯಾಧೀಶರು ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 17ಕ್ಕೆ ಮುಂದೂಡಿದರು.
ಮುಂಬೈನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಏಕನಾಥ್ ಶಿಂಧೆ ಅವರ ವಿರುದ್ಧ ನೀಡಿದ ಹೇಳಿಕೆಗಳು 36 ವರ್ಷದ ಕಾಮ್ರಾ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು, ವಿವಾದಕ್ಕೆ ಕಾರಣವಾಗಿವೆ. ಈ ಸಂಬಂಧ ಮುಂಬೈ ಪೊಲೀಸರು ಮೂರು ಬಾರಿ ಸಮನ್ಸ್ ಜಾರಿ ಮಾಡಿದ್ದಾರೆ.
ಏಕನಾಥ್ ಶಿಂಧೆ ವಿರುದ್ಧದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಕಾರ್ಯಕರ್ತರು ಮುಂಬೈನ ಖಾರ್ ಪ್ರದೇಶದ ಕಾಂಟಿನೆಂಟಲ್ ಹೋಟೆಲ್‌ನಲ್ಲಿರುವ ಹ್ಯಾಬಿಟಾಟ್ ಕಾಮಿಡಿ ಕ್ಲಬ್ ಅನ್ನು ಧ್ವಂಸಗೊಳಿಸಿದ್ದಾರೆ. ಸ್ಟ್ಯಾಂಡ್‌ಅಪ್ ಕಾಮಿಡಿಯನ್ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿದೆ.
ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಕಾಮ್ರಾ, 2021ರಲ್ಲಿ ಮುಂಬೈನಿಂದ ತಮಿಳುನಾಡಿಗೆ ತೆರಳಿದ್ದಾಗಿ ಮತ್ತು "ಅಂದಿನಿಂದ ಸಾಮಾನ್ಯವಾಗಿ ಈ ರಾಜ್ಯದ ನಿವಾಸಿಯಾಗಿದ್ದೇನೆ" ಮತ್ತು ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾಗುವ ಭಯವಿದೆ ಎಂದು ಹೇಳಿದ್ದರು.
Advertisement