ಮುಂಬೈ: ಮಾಜಿ ಕ್ರಿಕೆಟಿಗ ಕೇದಾರ್ ಜಾಧವ್ ಬಿಜೆಪಿಗೆ ಸೇರ್ಪಡೆ
ಮುಂಬೈ: ಭಾರತದ ಮಾಜಿ ಕ್ರಿಕೆಟ್ ಆಟಗಾರ ಕೇದಾರ್ ಜಾಧವ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮುಂಬೈಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ಜಾದವ್ ಕೇಸರಿ ಪಕ್ಷ ಸೇರಿಕೊಂಡರು. ಅವರಿಗೆ ಕೇಸರಿ ಶಾಲು ನೀಡಿ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ್ ಬಾವಂಕುಲೆ ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಕೇದಾರ್ ಜಾಧವ್, 2014 ರಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ನಾಯಕತ್ವದ ಬಿಜೆಪಿ ಸರ್ಕಾರದ ಸಾಧನೆಗಳಿಂದ ಪ್ರಭಾವಿತವಾಗಿರುವುದಾಗಿ ಹೇಳಿದರು.
ಬಿಜೆಪಿಗೆ ನನ್ನಿಂದ ಸಾಧ್ಯವಾದಷ್ಟು ಸಣ್ಣ ಕೊಡುಗೆಯನ್ನು ನೀಡುವುದು ನನ್ನ ಗುರಿ. ನನಗೆ ಯಾವುದೇ ಜವಾಬ್ದಾರಿ ಸಿಕ್ಕರೂ, ಅದನ್ನು ಸಂಪೂರ್ಣ ಪ್ರಾಮಾಣಿಕತೆಯಿಂದ ಪೂರೈಸಲು ಪ್ರಯತ್ನಿಸುತ್ತೇನೆ ಎಂದರು.
ಕೇದಾರ್ ಜಾಧವ್ ಭಾರತದ ಪರ 73 ಏಕದಿನ ಮತ್ತು 9 ಟಿ20 ಅಂತಾರಾಷ್ಟ್ರೀಯ ಪಂದ್ಯ ಆಡಿದ್ದಾರೆ. ಈ ಅವಧಿಯಲ್ಲಿ, 2 ಶತಕ ಹಾಗೂ 6 ಅರ್ಧಶತಕ ಸೇರಿದಂತೆ 1,389 ರನ್ ಗಳಿಸಿದ್ದಾರೆ. 9 ಟಿ20 ಪಂದ್ಯಗಳಲ್ಲಿ ಕೇವಲ 122 ರನ್ ಗಳಿಸಿದ್ದಾರೆ.
ತಮ್ಮ ವಿಶಿಷ್ಠ ಬೌಲಿಂಗ್ ಶೈಲಿಯಿಂದಲೇ ಹೆಸರುವಾಸಿಯಾದ ಕೇದಾರ್ ಜಾಧವ್, 27 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಪರ ಆಡಿದ್ದಾರೆ. ಕೇದಾರ್ ಜಾಧವ್ ಕಳೆದ ವರ್ಷ ಎಲ್ಲಾ ಮಾದರಿಯ ಕ್ರಿಕೆಟಿನಿಂದ ನಿವೃತ್ತರಾದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ