
ಬುಲಂದ್‌ಶಹರ್: ಉತ್ತರ ಪ್ರದೇಶದ ಸಿಕಂದರಾಬಾದ್ ನಲ್ಲಿ ಪೆಟ್ರೋಲ್ ಪಂಪ್ ಮ್ಯಾನೇಜರ್ ಒಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಗುರುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ತಡರಾತ್ರಿ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು, ತಮ್ಮ ಬೈಕ್‌ಗೆ ಪೆಟ್ರೋಲ್ ತುಂಬಿಸಿದ ನಂತರ ಪ್ಲಾಸ್ಟಿಕ್ ಬಾಟಲಿಗೆ ಪೆಟ್ರೋಲ್ ಹಾಕುವಂತೆ ಹೇಳಿದ್ದಾರೆ. ಇದಕ್ಕೆ ಸಿಬ್ಬಂದಿ ನಿರಾಕರಿಸಿದ್ದಾರೆ.
ಬಳಿಕ ಪಂಪ್ ಮ್ಯಾನೇಜರ್ ರಾಜು ಶರ್ಮಾ(30) ಅವರ ಬಳಿ ಹೋಗಿ ಬಾಟಲಿಗೆ ಪೆಟ್ರೋಲ್ ಹಾಕುವಂತೆ ಒತ್ತಾಯಿಸಿದ್ದಾರೆ. ಶರ್ಮಾ ಕೂಡ ಇದಕ್ಕೆ ಒಪ್ಪಿಲ್ಲ. ಈ ವೇಳೆ ವಾಗ್ವಾದ ನಡೆದಿದ್ದು, ಅವರ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶರ್ಮಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ಇಬ್ಬರು ದುಷ್ಕರ್ಮಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶ್ಲೋಕ್ ಕುಮಾರ್ ಅವರು ತಿಳಿಸಿದ್ದಾರೆ.
"ಸಿಸಿಟಿವಿ ಕ್ಯಾಮೆರಾ ದೃಶ್ಯಗಳ ಸಹಾಯದಿಂದ ಆರೋಪಿಗಳನ್ನು ಗುರುತಿಸಲಾಗಿದೆ. ಅವರನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ" ಎಂದು ಅವರು ಹೇಳಿದ್ದಾರೆ.
Advertisement