
ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಂ (TTD) ಗೋಶಾಲೆಯಲ್ಲಿ ನಿರ್ಲಕ್ಷ್ಯ ಹಾಗೂ ಅಸಮರ್ಪಕ ನಿರ್ವಹಣೆಯಿಂದ ಕಳೆದ ಮೂರು ತಿಂಗಳ ಅವಧಿಯಲ್ಲಿ 100 ಗೋವುಗಳು ಸಾವನ್ನಪ್ಪಿವೆ ಎಂದು YSRP ನಾಯಕ ಹಾಗೂ TTD ಮಾಜಿ ಅಧ್ಯಕ್ಷ ಭುಮನಾ ಕರುಣಾಕರ ರೆಡ್ಡಿ ಆಂಧ್ರ ಪ್ರದೇಶ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.
ಶುಕ್ರವಾರ ತಿರುಪತಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೆಡ್ಡಿ, ಸೂಕ್ತ ರೀತಿಯಲ್ಲಿ ಆರೈಕೆ ಮಾಡದೆ ಹಾಗೂ ಕಳಪೆ ನಿರ್ವಹಣೆ ಕಾರಣದಿಂದ ಹಸುಗಳ ಸಾವು ಆಗಿದೆ. ಕೂಡಲೇ ತನಿಖೆ ನಡೆಸಿ ಸತ್ಯಾಂಶವನ್ನು ಬಯಲಿಗೆಳೆದು ಪವಿತ್ರ ತಿರುಮಲದ ಪಾವಿತ್ರ್ಯತೆ ಕಾಪಾಡಬೇಕು ಎಂದು ಒತ್ತಾಯಿಸಿದರು. 100 ಗೋವುಗಳು ಸಾವನ್ನಪ್ಪಿವೆ ಎಂಬುದು ಸಾರ್ವಜನಿಕರ ಗಮನಕ್ಕೆ ಬಂದಿದೆ. ಆದರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಅವರು ಹೇಳಿದರು.
ಸಮ್ಮಿಶ್ರ ಸರ್ಕಾರವು ನಮ್ಮ ನಾಯಕ ವೈಎಸ್ ಜಗನ್ ಮೋಹನ್ ರೆಡ್ಡಿ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವುದರ ಮೇಲೆ ಗಮನ ಹರಿಸಿದೆ ಎಂದು ಹೇಳಿದ ರೆಡ್ಡಿ, ಗೋಶಾಲೆಯು ಶಿಥಿಲವಾಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಪ್ರಸ್ತುತ ಪಶುವೈದ್ಯಕೀಯ ವಿಜ್ಞಾನದಲ್ಲಿ ಯಾವುದೇ ಅರ್ಹತೆ ಇಲ್ಲದ ವಿಭಾಗೀಯ ಅರಣ್ಯಾಧಿಕಾರಿ ಇದನ್ನು ನೋಡಿಕೊಳ್ಳುತ್ತಿದ್ದಾರೆ. ಇದು ಸರ್ಕಾರ ಮತ್ತು ಅದು ಆಡಳಿತ ಮಂಡಳಿಯ ನಿರ್ಲಕ್ಷ್ಯವಲ್ಲದೇ ಮತ್ತೇನಲ್ಲಾ. ಹಿಂದಿನ ಸರ್ಕಾರದ ಅವಧಿಯಲ್ಲಿ
ಗೋಶಾಲೆ ಅಭಿವೃದ್ಧಿ ಹೊಂದಿತ್ತು. ಗುಜರಾತ್, ರಾಜಸ್ಥಾನ ಮತ್ತು ಪಂಜಾಬ್‌ನಿಂದ 550 ಕ್ಕೂ ಹೆಚ್ಚು ದೇಶಿ ಹಸುಗಳನ್ನು ತಂದಿದ್ದೇವೆ. ಆಗ, ಗೋಶಾಲೆಯಿಂದ ತಿರುಮಲಕ್ಕೆ ಪ್ರತಿನಿತ್ಯ 1,700 ಲೀಟರ್ ಹಾಲನ್ನು ಧಾರ್ಮಿಕ ಕ್ರಿಯೆಗಳಿಗಾಗಿ ಕಳುಹಿಸಲಾಗುತ್ತಿತ್ತು. ಇಂದು ಅದು 500 ಲೀಟರ್ ಗೆ ಕಡಿಮೆಯಾಗಿದೆ ಎಂದು ಟೀಕಿಸಿದರು.
ಹಿಂದೂ ಧರ್ಮದಲ್ಲಿ ಗೋವುಗಳ ಪವಿತ್ರ ಸ್ಥಾನಮಾನವನ್ನು ಹೇಳಿದ ಅವರು, ಪುರಾಣಗಳ ಪ್ರಕಾರ ವೆಂಕಟೇಶ್ವರ ಗೋವುಗಳ ಹಾಲಿನಿಂದ ಬದುಕುಳಿದ ಎನ್ನಲಾಗಿದೆ. ಹಸುವನ್ನು ಪವಿತ್ರ ಎಂದು ಪೂಜಿಸಲಾಗುತ್ತದೆ, ಆದರೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸನಾತನ ಧರ್ಮದ ಬಗ್ಗೆ ದೊಡ್ಡದಾಗಿ ಮಾತನಾಡುತ್ತಿದ್ದರೂ, ಅವರ ಸರ್ಕಾರವು ಈ ಪ್ರಾಣಿಗಳ ನೋವಿಗೆ ಕಣ್ಣು ಮುಚ್ಚಿಕುಳಿತಿದೆ ಎಂದು ಅವರು ಹೇಳಿದರು.
ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಇದು "ನಕಲಿ ಸುದ್ದಿಯಾಗಿದ್ದು, ನಂಬಬೇಡಿ ಎಂದು ಸಾರ್ವಜನಿಕರಿಗೆ ತಿಳಿಸಿದೆ.
ಟಿಟಿಡಿ ಗೋಶಾಲೆಯಲ್ಲಿ ಗೋವುಗಳು ಸಾವನ್ನಪ್ಪಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಮಾಡುತ್ತಿರುವ ಅಪಪ್ರಚಾರ ಸುಳ್ಳಲ್ಲ. ಮೃತಪಟ್ಟ ಗೋವುಗಳ ಫೋಟೋಗಳು ಟಿಟಿಡಿ ಗೋಶಾಲೆಗೆ ಸಂಬಂಧಿಸಿಲ್ಲ. ಸಾವನ್ನಪ್ಪಿದ್ದ ಗೋವುಗಳ ಫೋಟೋಗಳನ್ನು ದುರುದ್ದೇಶದಿಂದ ತೋರಿಸಿ ಭಕ್ತರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಅಪಪ್ರಚಾರ ಮಾಡುವುದನ್ನು ಟಿಟಿಡಿ ಖಂಡಿಸುತ್ತದೆ. ಸಾರ್ವಜನಿಕರು ಇಂತಹ ನಕಲಿ ಸುದ್ದಿಗಳನ್ನು ನಂಬಬೇಡಿ ಎಂದು ಟಿಟಿಡಿಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಟಣೆ ಮೂಲಕ ಹೇಳಿದ್ದಾರೆ.
Advertisement