
ಅಲಹಾಬಾದ್: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು, ಈ ಬಾರಿ ಕೃತ್ಯಕ್ಕೆ ಸಂತ್ರಸ್ಥೆಯೇ ಕಾರಣ ಎಂದು ಹೇಳಿ ಆರೋಪಿಗೆ ಜಾಮೀನು ಮಂಜೂರು ಮಾಡಿ ಅಚ್ಚರಿ ತೀರ್ಪು ನೀಡಿದೆ.
ಯುವತಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಬಾದ್ ಹೈಕೋರ್ಟ್ ಈ ತೀರ್ಪು ನೀಡಿದ್ದು, ಕೃತ್ಯಕ್ಕೆ ಸಂತ್ರಸ್ತೆಯೇ ಕಾರಣ.. ಆಕೆಯೇ ಅಪಾಯವನ್ನು ಆಹ್ವಾನಿಸಿದ್ದಾಳೆ ಎಂದು ಅಭಿಪ್ರಾಯಪಟ್ಟು ಆರೋಪಿಗೆ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶ ಸಂಜಯ್ ಕುಮಾರ್ ಸಿಂಗ್ ಅವರು ಜಾಮೀನು ಮಂಜೂರು ಮಾಡಿದ್ದಾರೆ.
ಏನಿದು ಪ್ರಕರಣ?
ನೋಯ್ಡಾ ಕ್ಯಾಂಪಸ್‌ನ ಅಮಿಟಿ ವಿಶ್ವವಿದ್ಯಾಲಯದಿಂದ ಎಂಎ ವ್ಯಾಸಂಗ ಮಾಡುತ್ತಿದ್ದ ಸಂತ್ರಸ್ಥೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಆರೋಪಿ ನಿಶ್ಚಲ್ ಚಂದಕ್ ಎಂಬಾತನನ್ನು ಡಿಸೆಂಬರ್ 2024 ರಲ್ಲಿ ಬಂಧಿಸಲಾಗಿತ್ತು. ಆತ ಅಂದಿನಿಂದ ಜೈಲಿನಲ್ಲಿದ್ದಾನೆ. ದೆಹಲಿಯ ಹೌಜ್ ಖಾಸ್‌ನಲ್ಲಿರುವ ಬಾರ್‌ನಲ್ಲಿ ಆರೋಪಿ ಯುವತಿಯನ್ನು ಭೇಟಿಯಾಗಿದ್ದ.
ಬಾರ್‌ನಲ್ಲಿ ಪರಿಚಯವಾದ ಆರೋಪಿ, ತನ್ನ ಸಂಬಂಧಿಕರ ಫ್ಲಾಟ್‌ನಲ್ಲಿ ತನ್ನ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದರು. ತನ್ನ ಗೆಳತಿ ಮತ್ತು ಗೆಳೆಯರೊಂದಿಗೆ ಬಾರ್‌ನಲ್ಲಿ ಬೆಳಗಿನ ಜಾವ 3 ಗಂಟೆಯವರೆಗೆ ಮದ್ಯ ಸೇವಿಸಿದ ನಂತರ ಆಕೆಗೆ ತೀವ್ರ ಕುಡಿತದ ಅಮಲಿನಲ್ಲಿದ್ದಳು. ಈ ವೇಳೆ ಆಕೆಯನ್ನು ಕರೆದೊಯ್ದ ಆರೋಪಿ ನಿಶ್ಚಲ್ ಚಂದಕ್ ಅತ್ಯಾಚಾರವೆಸಗಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
2024ರ ಸೆಪ್ಟೆಂಬರ್‌ನಲ್ಲಿ ಉತ್ತರ ಪ್ರದೇಶದ ನೋಯ್ಡಾದಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಆರೋಪಿ ನಿಶ್ಚಲ್ ಚಂದಕ್ ನನ್ನು ಡಿಸೆಂಬರ್‌ನಲ್ಲಿ ಪೊಲೀಸರು ಬಂಧಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿರುವ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶ ಸಂಜಯ್ ಕುಮಾರ್ ಸಿಂಗ್ ಅವರು ಮಾರ್ಚ್ 11ರಂದು ಆರೋಪಿಗೆ ಜಾಮೀನು ನೀಡಿದ್ದಾರೆ.
ದೂರಿನಲ್ಲೇನಿದೆ?
ತನ್ನ ಮೇಲಾದ ಕೃತ್ಯದ ಬಗ್ಗೆ ನೋಯ್ಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಯುವತಿ, “2024ರ ಸೆಪ್ಟೆಂಬರ್‌ನಲ್ಲಿ ತನ್ನ ಮೂವರು ಸ್ನೇಹಿತೆಯರೊಂದಿಗೆ ದೆಹಲಿಯ ಬಾರ್‌ಗೆ ಹೋಗಿದ್ದೆ. ಅಲ್ಲಿ, ಕೆಲವು ಪರಿಚಯಸ್ಥ ಸ್ನೇಹಿತರನ್ನು ಭೇಟಿ ಮಾಡಿದೆ. ಅವರಲ್ಲಿ ಆರೋಪಿ ನಿಶ್ಚಲ್ ಚಂದಕ್ ಕೂಡ ಒಬ್ಬ. ನಾವು ಬಾರ್‌ನಲ್ಲಿ ಮದ್ಯಪಾನ ಮಾಡಿದೆವು. ಬೆಳಗಿನ ಜಾವ 3 ಗಂಟೆವರೆಗೂ ಬಾರ್‌ನಲ್ಲಿಯೇ ಇದ್ದೆ. ಈ ವೇಳೆ, ತನ್ನೊಂದಿಗೆ ಬರುವಂತೆ ನಿಶ್ಚಲ್ ಒತ್ತಾಯಿಸುತ್ತಲೇ ಇದ್ದ.
ಆದರೆ, ನಾನು ಹೋಗಲು ನಿರಾಕರಿಸಿದ್ದೆ. ಆದಾಗ್ಯೂ, ಬೆಳಗಿನ ಜಾವ ತಮ್ಮ ಮನೆಗೆ ಬಂದು ವಿಶ್ರಾಂತಿ ಪಡೆಯಲು ಕೇಳಿದ, ಆಗ, ನಾನು ಆತನೊಂದಿಗೆ ತೆರಳಿದೆ. ಆದರೆ, ದಾರಿಯುದ್ದಕ್ಕೂ ನನ್ನೊಂದಿಗೆ ಅನುಚಿತವಾಗಿ ವರ್ತಿಸಲು ಆರಂಭಿಸಿದ್ದ. ಅಲ್ಲದೆ, ನೋಯ್ಡಾದಲ್ಲಿರುವ ಮನೆಗೆ ಕರೆದೊಯ್ಯುವ ಬದಲು, ಗುರುಗಾಂವ್‌ನಲ್ಲಿರುವ ಆತನ ಸಂಬಂಧಿಯ ಮನೆಗೆ ಕರೆದೊಯ್ದು, ಅಲ್ಲಿ ಅತ್ಯಾಚಾರ ಎಸಗಿದ್ದಾನೆ” ಎಂದು ಯುವತಿ ಆರೋಪಿಸಿದ್ದರು.
ನೀನೇ ಅಪಾಯ ಅಹ್ವಾನಿಸಿದ್ದೀಯಾ
ಇನ್ನು ತೀರ್ಪಿನ ವೇಳೆ ನ್ಯಾಯಾಧೀಶರು, “ಸಂತ್ರಸ್ತೆಯ ಆರೋಪ ನಿಜವೆಂದು ಒಪ್ಪಿಕೊಂಡರೂ ಸಹ, ಆಕೆಯೇ ಸಮಸ್ಯೆಯನ್ನು ಸ್ವತಃ ತನ್ನ ಮೈ ಮೇಲೆಳೆದುಕೊಂಡಿದ್ದಾಳೆ. ಅಪರಾಧಕ್ಕೆ ಕಾರಣಳಾಗಿದ್ದಾಳೆ ಎಂಬುದಾಗಿ ತೀರ್ಮಾನಿಸಬಹುದು ಎಂದು ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ” ಎಂದು ನ್ಯಾಯಾಧೀಶ ಸಂಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.
'ಒಂದು ವೇಳೆ ಸಂತ್ರಸ್ತೆಯ ಆರೋಪ ನಿಜವೆಂದು ಒಪ್ಪಿಕೊಂಡರೂ ಸಹ, ಆಕೆಯೇ ತೊಂದರೆಗೆ ಆಹ್ವಾನ ನೀಡಿದ್ದಾಳೆ ಮತ್ತು ಅದಕ್ಕೆ ಆಕೆಯೇ ಕಾರಣಳಾಗಿದ್ದಾಳೆ ಎಂದು ತೀರ್ಮಾನಿಸಬಹುದು ಎಂದು ಈ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸಂತ್ರಸ್ತೆಯು ತನ್ನ ಹೇಳಿಕೆಯಲ್ಲಿ ಇದೇ ರೀತಿಯ ನಿಲುವನ್ನು ತೆಗೆದುಕೊಂಡಿದ್ದಾರೆ. ಆಕೆಯ ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಕನ್ಯಾಪೊರೆ ಹರಿದಿರುವುದು ಕಂಡುಬಂದಿದೆ. ಆದರೆ ವೈದ್ಯರು ಲೈಂಗಿಕ ದೌರ್ಜನ್ಯದ ಬಗ್ಗೆ ಯಾವುದೇ ಅಭಿಪ್ರಾಯವನ್ನು ನೀಡಿಲ್ಲ. ಹೀಗಾಗಿ ಇದು ಸಹಮತದ ಲೈಂಗಿಕ ಕ್ರಿಯೆಯೂ ಆಗಿರಬಹುದು" ಎಂದು ಆರೋಪಿಯ ಜಾಮೀನು ಅರ್ಜಿಯನ್ನು ಅಂಗೀಕರಿಸುವಾಗ ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್ ಹೇಳಿದರು.
ಈ ಹಿಂದೆ ಇದೇ ಅಲಹಾಬಾದ್ ಹೈಕೋರ್ಟ್ ಅತ್ಯಾಚಾರ ಯತ್ನಕ್ಕೆ ಸಂಬಂಧಿಸಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, 'ಸಂತ್ರಸ್ತೆಯ ಸ್ತನಗಳನ್ನು ಹಿಡಿಯುವುದು, ಆಕೆಯ ಪೈಜಾಮ ದಾರ ಅಥವಾ ಪ್ಯಾಂಟ್ ಎಳೆಯುವುದು ಅತ್ಯಾಚಾರ ಅಥವಾ ಅತ್ಯಾಚಾರ ಯತ್ನ ಆಗುವುದಿಲ್ಲ..' ಎಂದು ಅಭಿಪ್ರಾಯಪಟ್ಟು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.
Advertisement