
ಅಯೋಧ್ಯೆ: ಅಯೋಧ್ಯೆ ರಾಮ ಮಂದಿರ ಪಕ್ಕದ ಅತಿಥಿಗೃಹದಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯ ವಿಡಿಯೊ ಚಿತ್ರೀಕರಿಸಿದ ಆರೋಪದ ಮೇರೆಗೆ 25 ವರ್ಷದ ಹೋಟೆಲ್ ಸಿಬ್ಬಂದಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ರಾಮ ಮಂದಿರದ ಗೇಟ್ ಸಂಖ್ಯೆ 3 ರಿಂದ ಕೇವಲ 50 ಮೀಟರ್ ದೂರದಲ್ಲಿರುವ ರಾಜಾ ಅತಿಥಿ ಗೃಹದಲ್ಲಿ ಮುಂಜಾನೆ 6 ಗಂಟೆಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಹೊಟೆಲ್ ಸಿಬ್ಬಂದಿಯೇ ಮಹಿಳೆ ಸ್ನಾನ ಮಾಡುತ್ತಿದ್ದಾಗ ತನ್ನ ಮೊಬೈಲ್ ನಲ್ಲಿ ಆಕೆಯ ವಿಡಿಯೋ ಸೆರೆ ಹಿಡಿದಿದ್ದಾನೆ ಎಂದು ಹೇಳಲಾಗಿದೆ.
ಈ ಸಂಬಂಧ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಅಯೋಧ್ಯೆ ಪೊಲೀಸರು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ನಿವಾಸಿ 25 ವರ್ಷದ ಸೌರಭ್ ತಿವಾರಿ ಎಂಬಾತನನ್ನು ಬಂಧಿಸಿದ್ದಾರೆ. ಈತ ಇದೇ ರಾಜಾ ಅತಿಥಿ ಗೃಹದಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಈತ ವಿಡಿಯೋ ಚಿತ್ರೀಕರಿಸುತ್ತಿದ್ದಾಗಲೇ ಹೊಟೆಲ್ ಇತರೆ ಅತಿಥಿಗಳು ಈತನನ್ನು ಸಾಕ್ಷ್ಯ ಸಮೇತ ಹಿಡಿದಿದ್ದಾರೆ ಎಂದು ಹೇಳಲಾಗಿದೆ.
ಪ್ರಸ್ತುತ ಈತನನ್ನು ವಶಕ್ಕೆ ಪಡೆದಿರುವ ಪೊಲೀಸರು ಈತನ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಅದನ್ನು ಪರಿಶೀಲಿಸಿದಾಗ ಅದರಲ್ಲಿ ಇತರೆ ಮಹಿಳೆಯರ ಹಲವು ವಿಡಿಯೋಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾರಣಾಸಿಯಿಂದ ಬಂದಿದ್ದ ಮಹಿಳೆಯೊಬ್ಬರು ಸ್ನಾನ ಮಾಡುತ್ತಿದ್ದಾಗ ನೆರಳು ಕಂಡು, ಟಿನ್ ಶೆಡ್ ನ ಮೇಲಿನಿಂದ ವಿಡಿಯೊ ಮಾಡುತ್ತಿರುವುದು ಪತ್ತೆಯಾಯಿತು. ಭಯಗೊಂಡ ಮಹಿಳೆ ನೆರವಿಗಾಗಿ ಕೂಗಿಕೊಂಡು, ಸ್ನಾನಗೃಹದಿಂದ ಹೊರಬಂದರು. ಇತರ ಗ್ರಾಹಕರು ಇವರ ಆಕ್ರಂದನ ಕೇಳಿ ಅಲ್ಲಿಗೆ ಧಾವಿಸಿ ಆರೋಪಿಯನ್ನು ಹಿಡಿದರು. ಬಳಿಕ ರಾಮಜನ್ಮಭೂಮಿ ಪೊಲೀಸರಿಗೆ ಹಸ್ತಾಂತರಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement