ತಮಿಳುನಾಡು: 'ಜೈ ಶ್ರೀ ರಾಮ್' ಘೋಷಣೆ ಕೂಗುವಂತೆ ವಿದ್ಯಾರ್ಥಿಗಳಿಗೆ ಹೇಳಿದ ರಾಜ್ಯಪಾಲರು! ಮತ್ತೊಂದು ವಿವಾದ
ಮಧುರೈ: ತಮಿಳುನಾಡು ರಾಜ್ಯ ಸರ್ಕಾರದ ನಡುವಿನ ಸಂಘರ್ಷದೊಂದಿಗೆ ಆಗಾಗ್ಗೆ ಸುದ್ದಿಯಾಗುವ ರಾಜ್ಯಪಾಲ ಆರ್ ಎನ್ ರವಿ ಈಗ ಮತ್ತೊಂದು ವಿಚಾರದಲ್ಲಿ ವಿವಾದಕ್ಕೆ ಗುರಿಯಾಗಿದ್ದಾರೆ.
ಮಧುರೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳಿಗೆ 'ಜೈ ಶ್ರೀ ರಾಮ್ ' ಘೋಷಣೆ ಕೂಗುವಂತೆ ಹೇಳುವ ಮೂಲಕ ವ್ಯಾಪಕ ಟೀಕೆಗೊಳಗಾಗಿದ್ದಾರೆ.
ಹೌದು. ಮಧುರೈನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ರವಿ ಅವರು ತಮ್ಮ ಭಾಷಣದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಹೇಳಿದ್ದಾರೆ. ಇದನ್ನು ಕಾಂಗ್ರೆಸ್ ಸೇರಿದಂತೆ ಆಡಳಿತಾರೂಢ ಡಿಎಂಕೆ ನಾಯಕರು ಖಂಡಿಸಿದ್ದಾರೆ.
ರಾಜ್ಯಪಾಲರ ಹೇಳಿಕೆ ಅತ್ಯಂತ ಖಂಡನೀಯ ಎಂದು ಕಾಂಗ್ರೆಸ್ ಶಾಸಕ ಜೆಎಂಎಚ್ ಹಸನ್ ಮೌಲಾನಾ ಹೇಳಿದ್ದಾರೆ. ರಾಜ್ಯಪಾಲರು RSS ಮತ್ತು ಬಿಜೆಪಿಯ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಇಂತಹ ಹೇಳಿಕೆಗಳು ಅವರು ಅಲಂಕರಿಸಿರುವ ಸಾಂವಿಧಾನಿಕ ಹುದ್ದೆಗೆ ತಕ್ಕುದಲ್ಲ ಎಂದರು.
ರಾಜ್ಯಪಾಲರು ದೇಶದ ಅತ್ಯುನ್ನತ ಹುದ್ದೆಯಲ್ಲಿದ್ದಾರೆ ಆದರೆ ಅವರು ಧಾರ್ಮಿಕ ಮುಖಂಡರಂತೆ ಮಾತನಾಡುತ್ತಿದ್ದಾರೆ. ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಪ್ರಚಾರದ ಮಾಸ್ಟರ್ ಆಗಿದ್ದಾರೆ ಎಂದು ವೆಲಚೇರಿ ಶಾಸಕ ಹಸನ್ ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ರಾಜ್ಯಪಾಲರ ಹೇಳಿಕೆ"ಸ್ವೀಕಾರಾರ್ಹವಲ್ಲ ಮತ್ತು ನಾಚಿಕೆಗೇಡಿನ ಸಂಗತಿ" ಎಂದು ಡಿಎಂಕೆಯ ಹಿರಿಯ ನಾಯಕರೊಬ್ಬರು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ