
ಕೊಲ್ಕತಾ: ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಾಂಗೋರ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆಯಲ್ಲಿ ಇಂಡಿಯನ್ ಸೆಕ್ಯೂಲರ್ ಫ್ರಾಂಟ್ (ISF) ಬೆಂಬಲಿಗರು ಮತ್ತು ಪೊಲೀಸರೊಂದಿಗೆ ಸೋಮವಾರ ಘರ್ಷಣೆ ನಡೆದಿದೆ.
ಪಕ್ಷದ ನಾಯಕ ಮತ್ತು ಭಂಗಾರ್ ಶಾಸಕ ನೌಶಾದ್ ಸಿದ್ದಿಕ್ ಮಾತನಾಡುತ್ತಿದ್ದ ಪ್ರತಿಭಟನಾ ರ್‍ಯಾಲಿಯಲ್ಲಿ ಭಾಗವಹಿಸಲು ಮಧ್ಯ ಕೋಲ್ಕತ್ತಾದ ರಾಮ್‌ಲೀಲಾ ಮೈದಾನಕ್ಕೆ ತೆರಳುತ್ತಿದ್ದ ಐಎಸ್‌ಎಫ್ ಬೆಂಬಲಿಗರನ್ನು ಪೊಲೀಸರು ತಡೆದಿದ್ದರಿಂದ ಘರ್ಷಣೆ ಭುಗಿಲೆದ್ದಿದೆ. ಬಸಂತಿ ಹೆದ್ದಾರಿಯ ಭೋಜೆರ್‌ಹತ್ ಬಳಿ ಪ್ರತಿಭಟನಾಕಾರರನ್ನು ತಡೆದು ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ಗುಂಪು ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಲು ಯತ್ನಿಸಿದಾಗ ಉದ್ವಿಗ್ನತೆ ಉಂಟಾಯಿತು, ಇದು ಎರಡು ಕಡೆಯ ನಡುವೆ ಘರ್ಷಣೆಗೆ ಕಾರಣವಾಗಿದೆ.
ಪ್ರತಿಭಟನಾಕಾರರು ಕೆಲವು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಕೆಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಮ್‌ಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನಾ ರ್‍ಯಾಲಿಗೆ ಸರಿಯಾದ ಪೊಲೀಸ್ ಅನುಮತಿ ಇಲ್ಲದ ಕಾರಣ ಪೊಲೀಸರು ಲಾಠಿ ಚಾರ್ಜ್ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದಂತೆಯೇ ISF ಕಾರ್ಯಕರ್ತರು ಹೆದ್ದಾರಿಯಲ್ಲಿ ಧರಣಿ ಕುಳಿತರಿಂದ ಸಂಚಾರ ದಟ್ಟಣೆಗೆ ಕಾರಣವಾಯಿತು. ಪರಿಸ್ಥಿತಿ ಹತೋಟಿಗೆ ತರಲು ಹಿರಿಯ ಅಧಿಕಾರಿಗಳು ಸೇರಿದಂತೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಮೀಪದ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಬಳಿಕ ಪ್ರತಿಭಟನಾಕಾರರನ್ನು ಚದುರಿಸಿದರು.
ಕೋಲ್ಕತ್ತಾದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದಿಕ್, ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ಟೀಕಿಸಿದರು ಮತ್ತು ಅದನ್ನು ಹಿಂಪಡೆಯಲು ಒತ್ತಾಯಿಸಿದರು. ಈ ಕಾನೂನು ಕೇವಲ ಮುಸ್ಲಿಮರ ಮೇಲಿನ ದಾಳಿಯಲ್ಲ, ಸಂವಿಧಾನದ ಮೇಲಿನ ದಾಳಿಯಾಗಿದೆ. ಈ ಕಾಯ್ದೆಯನ್ನು ನಾವು ಒಪ್ಪುವುದಿಲ್ಲ. ಇಂತಹ ಕಾನೂನುಗಳನ್ನು ಬೆಂಬಲಿಸುವ ಸರಕಾರ ತೊಲಗಬೇಕು ಎಂದರು. ಬಿಜೆಪಿಯು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪ್ರತಿಪಕ್ಷಗಳ ಪ್ರತಿಭಟನೆಯನ್ನು ಹತ್ತಿಕ್ಕುತ್ತಿದೆ ಎಂದು ISF ಆರೋಪಿಸಿದೆ.
"ಪಶ್ಚಿಮ ಬಂಗಾಳದಲ್ಲಿ ಹೊಸ ವಕ್ಫ್ ಕಾನೂನನ್ನು ಜಾರಿಗೆ ತರುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ ನಮ್ಮ ಕಾರ್ಯಕರ್ತರನ್ನು ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಪೊಲೀಸರು ಏಕೆ ತಡೆಯುತ್ತಿದ್ದಾರೆ? ಪ್ರತಿಭಟನೆ ಮಾಡುವ ಹಕ್ಕು ತೃಣಮೂಲ ಕಾಂಗ್ರೆಸ್‌ಗೆ ಮಾತ್ರ ಇದೆಯೇ?" ಎಂದು ಕೇಳಿದ್ದಾರೆ. ಈ ಮಧ್ಯೆ ISF ಕಾರ್ಯಕರ್ತರು ಅಶಾಂತಿ ಉಂಟು ಮಾಡಲು ಮತ್ತು ಗೊಂದಲಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕ್ಯಾನಿಂಗ್ ಪುರ್ಬಾ ಟಿಎಂಸಿ ಶಾಸಕ ಶೋಕತ್ ಮೊಲ್ಲಾ ಆರೋಪಿಸಿದ್ದಾರೆ.
ಶುಕ್ರವಾರ ಮತ್ತು ಶನಿವಾರದಂದು ವಕ್ಫ್ (ತಿದ್ದುಪಡಿ) ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಸೂತಿ, ಧುಲಿಯನ್ ಮತ್ತು ಜಂಗಿಪುರ್ ಸೇರಿದಂತೆ ಮುರ್ಷಿದಾಬಾದ್‌ನ ಹಲವೆಡೆ ಹಿಂಸಾಚಾರ ನಡೆದಿತ್ತು. ಹಿಂಸಾಚಾರದಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಅಂಗಡಿಗಳು, ಮನೆಗಳು ಮತ್ತು ಹೋಟೆಲ್‌ಗಳನ್ನು ಧ್ವಂಸ ಮಾಡಲಾಗಿತ್ತು. ಪರಿಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ತಮ್ಮ ಸರ್ಕಾರವು ರಾಜ್ಯದಲ್ಲಿ ವಕ್ಫ್ ಕಾಯ್ದೆಯನ್ನು ಜಾರಿಗೆ ತರುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಹೇಳಿದ್ದರು.
Advertisement