
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಹೊಸ್ತಿಲಲ್ಲಿ ಬಿಜೆಪಿ- ಜೆಡಿಯು ನೇತೃತ್ವದ NDA ಮೈತ್ರಿಕೂಟ ತೊರೆದಿರುವುದಾಗಿ ಮಾಜಿ ಕೇಂದ್ರ ಸಚಿವ ಮತ್ತು ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷದ (RLGP) ಮುಖ್ಯಸ್ಥ ಪಶುಪತಿ ಕುಮಾರ್ ಪಾರಸ್ ಅವರು ಸೋಮವಾರ ಔಪಚಾರಿಕವಾಗಿ ಘೋಷಿಸಿದ್ದಾರೆ. ಇನ್ನು ಮುಂದೆ ಆರ್ ಎಲ್ ಜಿಪಿ ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ಮೈತ್ರಿಕೂಟದ ಭಾಗವಾಗಲ್ಲ ಎಂದು ಹೇಳಿದ್ದಾರೆ.
2024 ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಟಿಕೆಟ್ ನಿರಾಕರಿಸಿದ ನಂತರ ಪಾರಸ್ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಮತ್ತೊಂದೆಡೆ, ಅವರ ಸೋದರಳಿಯ ಮತ್ತು ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರಿಗೆ ಸಂಸತ್ ಚುನಾವಣೆಯಲ್ಲಿ ಐದು ಸ್ಥಾನಗಳನ್ನು ನೀಡಲಾಗಿತ್ತು.
ಬಿ ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪಾರಸ್, ಇನ್ನು ಮುಂದೆ ನಮಗೆ ಎನ್‌ಡಿಎ ಜೊತೆ ಯಾವುದೇ ಸಂಬಂಧವಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ನಮಗೆ ಸೂಕ್ತ ಸ್ಥಾನಗಳನ್ನು ಹಂಚಿಕೆ ಮಾಡುವ ಮೈತ್ರಿಯೊಂದಿಗೆ ಹೋಗುವುದಾಗಿ ತಿಳಿಸಿದರು.
ಭವಿಷ್ಯದ ಯೋಜನೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನು ಸೂಕ್ತ ಸಮಯದಲ್ಲಿ ಬಹಿರಂಗಪಡಿಸಲಾಗುವುದು. ಸದ್ಯಕ್ಕೆ ನಾವು ಎನ್‌ಡಿಎ ಜೊತೆಗಿನ ಸಂಬಂಧವನ್ನು ಮುರಿದುಕೊಳ್ಳುವುದಾಗಿ ಘೋಷಿಸಿದ್ದೇವೆ ಎಂದರು.
ಈ ವರ್ಷದ ಜನವರಿಯಲ್ಲಿ 'ದಹಿ-ಚುರಾ ಭೋಜ್ (ಹಬ್ಬ) ಸಂದರ್ಭದಲ್ಲಿ, ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಅವರು ಪಾರಾಸ್ ಅವರನ್ನು ಭೇಟಿ ಮಾಡಿದ್ದರು, ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಅಥವಾ ಮಹಾಮೈತ್ರಿಕೂಟದೊಂದಿಗೆ ಆರ್‌ಎಲ್‌ಜೆಪಿ ಕೈಜೋಡಿಸುವ ಸೂಚನೆ ನೀಡಿದ್ದಾರೆ.
Advertisement