
ರೇವಾ: ಗಂಡನೊಂದಿಗೆ ಪಿಕ್ನಿಕ್ ಗೆ ಬಂದಿದ್ದ 19 ವರ್ಷದ ನವವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದ 8 ಮಂದಿ ಆರೋಪಿಗಳಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಮಧ್ಯಪ್ರದೇಶದ ರೇವಾ ಜಿಲ್ಲೆಯ ಜನಪ್ರಿಯ ಪಿಕ್ನಿಕ್ ತಾಣವೊಂದರಲ್ಲಿ ಕಳೆದ ವರ್ಷ 19 ವರ್ಷದ ನವವಿವಾಹಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಎಂಟು ಆರೋಪಿಗಳಿಗೆ ರೇವಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಸಾಮೂಹಿಕ ಅತ್ಯಾಚಾರ ಪ್ರಕರಣದ ಎಲ್ಲ 8 ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಪದ್ಮಾ ಜಾತವ್, ಆರೋಪಿಗಳಿಗೆ ತಲಾ 2.3 ಲಕ್ಷ ರೂ ದಂಡ ವಿಧಿಸಿದ್ದಾರೆ.
ಏನಿದು ಘಟನೆ?
ಕಳೆದ ವರ್ಷ ಅಕ್ಟೋಬರ್ 21 ರಂದು ಮಧ್ಯಪ್ರದೇಶದ ರೇವಾದಲ್ಲಿ ನವವಿವಾಹಿತ ದಂಪತಿಗಳು ಭೈರವ್ ಬಾಬಾ ದೇವಸ್ಥಾನದ ಬಳಿಯ ಪಿಕ್ನಿಕ್ ತಾಣದಲ್ಲಿ ವಿಹಾರಕ್ಕೆ ಹೋಗಿದ್ದರು. ಈ ವೇಳೆ ದಂಪತಿ ಬಂಡೆಗಲ್ಲಿನ ಮೇಲೆ ಕುಳಿತು ಮಾತನಾಡುತ್ತಿದ್ದಾಗ 8 ಜನರಿದ್ದ ದುಷ್ಕರ್ಮಿಗಳ ತಂಡ ಅಲ್ಲಿಗೆ ಬಂದಿದೆ. ಗಾಂಜಾ ನಶೆಯಲ್ಲಿದ್ದ ಅವರು ಇಬ್ಬರನ್ನೂ ಮಾತನಾಡಿಸಿ ಬಳಿಕ ನೋಡ ನೋಡುತ್ತಲೇ ಸಂತ್ರಸ್ಥೆಯ ಪತಿಯನ್ನು ಹಿಡಿದು ಥಳಿಸಿ ಆತನನ್ನು ಮರಕ್ಕೆ ಕಟ್ಟಿಹಾಕಿದ್ದಾರೆ.
ಪತಿಯ ಎದುರೇ ನವವಿವಾಹಿತ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ
ಅತ್ತ ಪತಿಯನ್ನು ಮರಕ್ಕೆ ಕಟ್ಟಿದ ದುಷ್ಕರ್ಮಿಗಳು ಆತನ ಕಣ್ಣೆದುರೇ ಪತ್ನಿಯನ್ನು ಹಿಡಿದೆಳೆದಿದ್ದಾರೆ. ಅಲ್ಲದೆ ಆಕೆಯನ್ನು ಆತನ ಮುಂದೆಯೇ ವಿವಸ್ತ್ರಗೊಳಿಸಿ ಒಬ್ಬರ ಬಳಿಕ ಒಬ್ಬರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಅಲ್ಲದೆ ಈ ಪೈಕಿ ಓರ್ವ ತನ್ನ ಮೊಬೈಲ್ ನಲ್ಲಿ ಅತ್ಯಾಚಾರದ ವಿಡಿಯೋ ಚಿತ್ರೀಕರಿಸಿಕೊಂಡಿದ್ದ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ವಿಡಿಯೋ ಬಹಿರಂಗ ಮಾಡುವುದಾಗಿ ಬೆದರಿಕೆ ಹಾಕಿ ಬಿಟ್ಟು ಕಳುಹಿಸಿದ್ದರು.
ಘಟನೆ ಬಳಿಕ ಸಂತ್ರಸ್ಥರು ಪೊಲೀಸರಿಗೆ ದೂರು ನೀಡಿದ್ದು, ಅವರು ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಅವರಿಂದ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದರು. ಇದೇ ಮೊಬೈಲ್ ಫೋನ್ ನಲ್ಲಿನ ದೃಶ್ಯಗಳು ದುಷ್ಕರ್ಮಿಗಳು ತಪ್ಪಿತಸ್ಥರು ಎಂದು ಘೋಷಿಸಿಲು ನೆರವಾಯಿತು. ಇದೀಗ ಕೋರ್ಟ್ ಕೆಲವೇ ತಿಂಗಳಲ್ಲಿ ವಿಚಾರಣೆ ಬಳಿಕ ದುಷ್ಕರ್ಮಿಗಳಿಗೆ ಜೀವಾವಧಿ ಶಿಕ್ಷೆ ನೀಡಿದೆ.
ನ್ಯಾಯಾಲಯದ ತೀರ್ಪಿಗೆ ಪೊಲೀಸರ ಸ್ವಾಗತ
ಇನ್ನು ಆ ಸಮಯದಲ್ಲಿ ಈ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಪೊಲೀಸರಿಗೂ ಕೂಡ ಈ ಪ್ರಕರಣ ಸವಾಲಿನದ್ದಾಗಿತ್ತು. ಆದರೆ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ್ದ ಪೊಲೀಸರು ಕೆಲವೇ ದಿನಗಳ ಅಂತರದಲ್ಲಿ ದುಷ್ಕರ್ಮಿಗಳನ್ನು ಬಂಧಿಸಿದ್ದರು.
ಈ ಬಗ್ಗೆ ಮಾತನಾಡಿರುವ ರೇವಾ ಪೊಲೀಸ್ ಅಧೀಕ್ಷಕ (ಎಸ್‌ಪಿ) ವಿವೇಕ್ ಸಿಂಗ್, ನ್ಯಾಯಾಲಯದ ತೀರ್ಪು ಸ್ವಾಗತಾರ್ಹ. ಅಪರಾಧ ನಡೆದ ಐದು ತಿಂಗಳ ನಂತರ ಎಂಟು ಜನರಿಗೆ ಶಿಕ್ಷೆ ವಿಧಿಸಲಾಗಿದೆ. ಪೊಲೀಸರು ಅಪರಾಧ ಸ್ಥಳದಿಂದ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸಿ, ಆರೋಪಿಗಳು ದಾಖಲಿಸಿದ ಅಪರಾಧದ ವೀಡಿಯೊವನ್ನು ವಶಪಡಿಸಿಕೊಂಡರು ಮತ್ತು ವೈದ್ಯಕೀಯ ವರದಿಗಳನ್ನು ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು ಎಂದು ಹೇಳಿದರು.
Advertisement