
ನವದೆಹಲಿ: ಅತ್ಯಾಚಾರ ಪ್ರಕರಣವೊಂದರಲ್ಲಿ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರು ಇತ್ತೀಚೆಗೆ ನೀಡಿದ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ದೂರುದಾರರ ವಿರುದ್ಧ ಇಂತಹ ಅನುಚಿತ ಹೇಳಿಕೆಗಳನ್ನು ನೀಡದಂತೆ ನ್ಯಾಯಾಧೀಶರಿಗೆ ಮಂಗಳವಾರ ಎಚ್ಚರಿಕೆ ನೀಡಿದೆ.
'ಸಂತ್ರಸ್ತೆಯ ಸ್ತನಗಳನ್ನು ಹಿಡಿಯುವುದು, ಆಕೆಯ ಪೈಜಾಮ ದಾರ ಅಥವಾ ಪ್ಯಾಂಟ್ ಎಳೆಯುವುದು ಅತ್ಯಾಚಾರ ಅಥವಾ ಅತ್ಯಾಚಾರ ಯತ್ನ ಆಗುವುದಿಲ್ಲ' ಎಂದು ಮಾರ್ಚ್ 17 ರಂದು ವಿವಾದಾತ್ಮಕ ತೀರ್ಪು ನೀಡಿದ್ದ ಅಲಹಾಬಾದ್ ಹೈಕೋರ್ಟ್ ನ ಮತ್ತೊಂದು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಎಚ್ಚರಿಕೆ ನೀಡಿದೆ.
ಇಂದು ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸಿಹ್ ನೇತೃತ್ವದ ಸುಪ್ರೀಂ ಪೀಠ, ಪ್ರತಿಯೊಂದು ಪ್ರಕರಣದ ಸಂಗತಿಗಳು ಮತ್ತು ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಆರೋಪಿಗಳಿಗೆ ಜಾಮೀನು ನೀಡುವುದು ನ್ಯಾಯಾಧೀಶರ ವಿವೇಚನೆಗೆ ಬಿಟ್ಟ ವಿಷಯವಾಗಿದೆ. ಆದರೆ ದೂರುದಾರರ ವಿರುದ್ಧ ಈ ರೀತಿಯ ಅನಗತ್ಯ ಹೇಳಿಕೆ ನೀಡದಂತೆ ನ್ಯಾಯಾಧೀಶರಿಗೆ ಸೂಚಿಸಿದೆ.
"ಈಗ ಇನ್ನೊಬ್ಬ ನ್ಯಾಯಾಧೀಶರಿಂದ ಮತ್ತೊಂದು ಆದೇಶವಿದೆ. ಜಾಮೀನು ನೀಡಬಹುದು. ಆದರೆ ಅಂತಹ ಹೇಳಿಕೆಗಳನ್ನು ಏಕೆ ನೀಡಬೇಕು? ಅವರೇ ಅಪಾಯ ಆಹ್ವಾನಿಸಿದ್ದಾರೆ ಎಂದರೆ ಏನು? ವಿಶೇಷವಾಗಿ ಇಂತಹ ವಿಷಯಗಳನ್ನು ಹೇಳುವಾಗ ನ್ಯಾಯಾಧೀಶರು ಹೆಚ್ಚು ಜಾಗರೂಕರಾಗಿರಬೇಕು" ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಏಪ್ರಿಲ್ 11 ರಂದು ಅತ್ಯಾಚಾರ ಪ್ರಕರಣವೊಂದರಲ್ಲಿ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ ವೇಳೆ ಕೃತ್ಯಕ್ಕೆ ಸಂತ್ರಸ್ತೆಯೇ ಕಾರಣ.. ಆಕೆಯೇ ಅಪಾಯವನ್ನು ಆಹ್ವಾನಿಸಿದ್ದಾಳೆ ಎಂದು ನ್ಯಾಯಾಧೀಶ ಸಂಜಯ್ ಕುಮಾರ್ ಸಿಂಗ್ ಅಭಿಪ್ರಾಯಪಟ್ಟಿದ್ದರು.
ಸಂತ್ರಸ್ತ ಯುವತಿ ಕುಡಿದ ಅಮಲಿನಲ್ಲಿ ಆರೋಪಿಯ ಮನೆಗೆ ಹೋಗಲು ಒಪ್ಪುವ ಮೂಲಕ "ಸ್ವತಃ ಅಪಾಯಕ್ಕೆ ಆಹ್ವಾನ ನೀಡಿದ್ದಾಳೆ" ಎಂದು ಹೈಕೋರ್ಟ್ ಹೇಳಿತ್ತು.
ನೋಯ್ಡಾ ಕ್ಯಾಂಪಸ್‌ನ ಅಮಿಟಿ ವಿಶ್ವವಿದ್ಯಾಲಯದಲ್ಲಿ ಎಂಎ ವ್ಯಾಸಂಗ ಮಾಡುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಡಿಸೆಂಬರ್ 2024 ರಲ್ಲಿ ಬಂಧಿಸಲಾಗಿತ್ತು.
Advertisement