
ಲಖನೌ: ಹಲವು ಭಿನ್ನ, ವಿಭಿನ್ನ ತೀರ್ಪುಗಳ ಮೂಲಕ ದೇಶದ ಗಮನ ಸೆಳೆದಿರುವ ಅಲಹಾಬಾದ್ ಹೈಕೋರ್ಟ್ ಮತ್ತೊಂದು ಇಂತಹುದೇ ಮಹತ್ವದ ತೀರ್ಪು ನೀಡಿದೆ.
ಕುಟುಂಬದ ವಿರುದ್ಧವಾಗಿ ತಮ್ಮ ಸ್ವಂತ ಇಚ್ಛೆಯ ಮೇರೆಗೆ ಮದುವೆಯಾಗುವ ದಂಪತಿಗಳಿಗೆ ಅವರ ಜೀವ ಮತ್ತು ಸ್ವಾತಂತ್ರ್ಯದ ಮೇಲೆ ನಿಜವಾದ ಭಯ ಇಲ್ಲದಿದ್ದರೆ ರಕ್ಷಣೆ ನೀಡಲಾಗದು ಎಂದಿದೆ.
ಈ ತಿಂಗಳ ಆರಂಭದಲ್ಲಿ ಈ ತೀರ್ಪು ನೀಡಿದ ನ್ಯಾಯಮೂರ್ತಿ ಸೌರಭ್ ಶ್ರೀವಾಸ್ತವ, ತಮ್ಮ ಇಚ್ಚೆಯಂತೆ ಮದುವೆಯಾದ ದಂಪತಿಗಳು ನ್ಯಾಯಾಲಯದ ಮೂಲಕ ಸುರಕ್ಷತೆ ಪಡೆಯಬಹುದು. ಆದರೆ ಯಾವುದೇ ಬೆದರಿಕೆ ಗ್ರಹಿಕೆ ಇಲ್ಲದಿದ್ದಲ್ಲಿ, ಅಂತಹ ದಂಪತಿಗಳು "ಪರಸ್ಪರ ಬೆಂಬಲಿಸುವ ಮತ್ತು ಸಮಾಜವನ್ನು ಎದುರಿಸುವುದನ್ನು ಕಲಿಯಬೇಕು" ಎಂದು ಹೇಳಿದರು.
ತಮ್ಮ ಶಾಂತಿಯುತ ವೈವಾಹಿಕ ಬದುಕಿನಲ್ಲಿ ಮಧ್ಯಪ್ರವೇಶಿಸದಂತೆ ಪ್ರತಿವಾದಿಗಳಿಗೆ ನಿರ್ದೇಶಿಸಬೇಕು ಹಾಗೂ ತಮಗೆ ಪೊಲೀಸ್ ರಕ್ಷಣೆ ಬೇಕೆಂದು ಶ್ರೇಯಾ ಕೇಸರ್ವಾಣಿ ಮತ್ತು ಅವರ ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಶ್ರೀವಾಸ್ತವ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಆದಾಗ್ಯೂ, ಅವರ ಮನವಿಗಳನ್ನು ಆಲಿಸಿದ ನ್ಯಾಯಾಲಯ, ಅರ್ಜಿದಾರರಿಗೆ ಯಾವುದೇ ಗಂಭೀರ ಬೆದರಿಕೆ ಗ್ರಹಿಕೆ ಇಲ್ಲ ಎಂದು ಹೇಳುವ ಮೂಲಕ ಅರ್ಜಿ ವಿಲೇವಾರಿ ಮಾಡಿತು.
ಅರ್ಜಿದಾರರ ಜೀವನ ಮತ್ತು ಸ್ವಾತಂತ್ರ್ಯಕ್ಕೆ ಅಪಾಯವಿದೆ ಎಂದು ತೀರ್ಮಾನಿಸಲು ಯಾವುದೇ ಸಾಕ್ಷ್ಯ ಇಲ್ಲ ಎಂಬುದನ್ನು ನ್ಯಾಯಾಲಯವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಖಾಸಗಿ ಪ್ರತಿವಾದಿಗಳು ಅರ್ಜಿದಾರರಿಗೆ ದೈಹಿಕ ಅಥವಾ ಮಾನಸಿಕವಾಗಿ ಹಲ್ಲೆ ಮಾಡುವ ಸಾಧ್ಯತೆಯಿದೆ ಎಂದು ಸಾಬೀತುಪಡಿಸಲು ಒಂದು ಸಣ್ಣ ಸಾಕ್ಷ್ಯವೂ ಇಲ್ಲ ಎಂದು ನ್ಯಾಯಾಧೀಶರು ಹೇಳಿದರು.
Advertisement