'2026ಕ್ಕೆ ಸಮ್ಮಿಶ್ರ ಸರ್ಕಾರ ಎಂದು ಅಮಿತ್ ಶಾ ಹೇಳಿಲ್ಲ': ಬಿಜೆಪಿ ಜತೆ ಅಧಿಕಾರ ಹಂಚಿಕೆ ತಳ್ಳಿಹಾಕಿದ EPS
ಚೆನ್ನೈ: ಬಿಜೆಪಿ ನೇತೃತ್ವದ ಎನ್‌ಡಿಎಗೆ ಎಐಎಡಿಎಂಕೆ ಮತ್ತೆ ಅಧಿಕೃತವಾಗಿ ಸೇರ್ಪಡೆಯಾದ ಐದು ದಿನಗಳ ನಂತರ ಬುಧವಾರ ಮೌನ ಮುರಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ(ಇಪಿಎಸ್) ಅವರು, 2026ರ ವಿಧಾನಸಭಾ ಚುನಾವಣೆಯ ನಂತರ ತಮಿಳುನಾಡಿನಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
2026ರಲ್ಲಿ ಎಐಎಡಿಎಂಕೆ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ ಎಂದು ಏಪ್ರಿಲ್ 11ರಂದು ಚೆನ್ನೈನಲ್ಲಿ ಮೈತ್ರಿ ಘೋಷಣೆಯ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಅವರು ನೀಡಿದ್ದ ಹೇಳಿಗೆ ತದ್ವಿರುದ್ಧವಾಗಿ ಇಪಿಎಸ್ ಇಂದು ಹೇಳಿಕೆ ನೀಡಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆ ಎಂದೇ ಪರಿಗಣಿಸಲಾದ ಅಮಿತ್ ಶಾ ಹೇಳಿಕೆಯ ಬಗ್ಗೆ ಕೇಳಿದಾಗ, ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಇಪಿಎಸ್, ಈ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ ಎಂದರು.
"2026ಕ್ಕೆ ಸಮ್ಮಿಶ್ರ ಸರ್ಕಾರ ಎಂದು ಅವರು(ಅಮಿತ್ ಶಾ) ಹೇಳಿಲ್ಲ. ನೀವು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದೀರಿ ಮತ್ತು ತಂತ್ರಗಳನ್ನು ಆಡಲು ಪ್ರಯತ್ನಿಸುತ್ತಿದ್ದೀರಿ. ದಯವಿಟ್ಟು ಅದನ್ನು ನಿಲ್ಲಿಸಿ" ಎಂದು ವರದಿಗಾರರಿಗೆ ತಿಳಿಸಿದರು.
ಮತ್ತಷ್ಟು ಸ್ಪಷ್ಟಪಡಿಸಿದ ಪಳನಿಸ್ವಾಮಿ ಅವರು, "ಎಐಎಡಿಎಂಕೆ-ಬಿಜೆಪಿ ಒಟ್ಟಾಗಿ ಹೋರಾಡುತ್ತವೆ ಮತ್ತು ಚುನಾವಣೆಯ ನಂತರ ಸರ್ಕಾರ ರಚಿಸುತ್ತವೆ" ಎಂದು ಮಾತ್ರ ಅಮಿತ್ ಶಾ ಹೇಳಿದ್ದರು. ಅವರು ಸಮ್ಮಿಶ್ರ ಸರ್ಕಾರವೆಂದು ಹೇಳಿಲ್ಲ. "ರಾಷ್ಟ್ರ ಮಟ್ಟದಲ್ಲಿ ಮೈತ್ರಿಕೂಟವನ್ನು ಪ್ರಧಾನಿ ನರೇಂದ್ರ ಮೋದಿ ಮುನ್ನಡೆಸಲಿದ್ದಾರೆ ಮತ್ತು ತಮಿಳುನಾಡಿನಲ್ಲಿ ನಾನು ಮುನ್ನಡೆಸುತ್ತೇನೆ ಎಂದು ಅವರು ಹೇಳಿದರು. ನಿಮಗೆ ಅದು ಅರ್ಥವಾಗುತ್ತಿಲ್ಲವೇ?" ಎಂದು ಅವರು ಮಾಧ್ಯಮಗಳನ್ನು ಪ್ರಶ್ನಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ