

ಕೋಲ್ಕತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ವಕ್ಫ್ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಉಂಟಾದ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರನ್ನು ರಾಜ್ಯಪಾಲ ಸಿ. ವಿ. ಆನಂದ ಬೋಸ್ ಶನಿವಾರ ಭೇಟಿ ಮಾಡಿ, ಸಾಂತ್ವನ ಹೇಳಿದರು.
ಮೃತರ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದ ರಾಜ್ಯಪಾಲರು, ಅವರಿಗೆ ಸಾಧ್ಯವಿರುವ ಎಲ್ಲಾ ರೀತಿಯ ಭರವಸೆ ನೀಡಿದರು. ಕೊಲೆ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸುವುದಾಗಿ ಹೇಳಿರುವುದಾಗಿ ರಾಜಭವನದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಹಿಂಸಾಚಾರದ ವೇಳೆ ಜಾಫ್ರಬಾದ್ ಪ್ರದೇಶದ ಮನೆಯೊಂದರಲ್ಲಿ ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡು ಹರೋಗೋಂಬಿದೋ ದಾಸ್ ಮತ್ತು ಚಂದನ್ ದಾಸ್ ಎಂಬುವರ ಶವಗಳು ಅವರ ನಿವಾಸದಲ್ಲಿ ಪತ್ತೆಯಾಗಿದ್ದವು.
ಜಿಲ್ಲೆಯ ಧುಲಿಯನ್, ಸುಟಿ ಮತ್ತು ಜಂಗಿಪುರದ ಹಿಂಸಾಚಾರ ಪೀಡಿತ ಸ್ಥಳಗಳಿಗೂ ಬೋಸ್ ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಏಪ್ರಿಲ್ 8-12 ರಿಂದ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ನಡೆದ ವಕ್ಫ್ (ತಿದ್ದುಪಡಿ) ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ತಂದೆ- ಮಗ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಮತ್ತು 274 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.
ರಾಜ್ಯಪಾಲರ ಪ್ರವಾಸವನ್ನು ಮುಂದೂಡುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದರು. ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಭೇಟಿ ನೀಡಿದರೆ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನವಾಗಬಹುದು ಎಂದು ತಿಳಿಸಿದ್ದರು. ಆದರೆ ಬ್ಯಾನರ್ಜಿ ಅವರ ಮನವಿಯನ್ನು ಧಿಕ್ಕರಿಸಿ ರಾಜ್ಯಪಾಲರು ಭೇಟಿ ನೀಡಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ.
Advertisement