
ಮುಂಬೈ: ದೂರವಾಗಿರುವ ಸೋದರಸಂಬಂಧಿಗಳಾದ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಅವರು ಮತ್ತೆ ಒಂದಾಗುತ್ತಾರೆ ಎಂಬ ಊಹಾಪೋಹಗಳ ನಡುವೆ ಮುಂಬೈ ಮತ್ತು ಮಹಾರಾಷ್ಟ್ರದ ಹಿತಾಸಕ್ತಿಗಾಗಿ ಅವರಿಬ್ಬರು ಒಂದಾಗುವ ಸಮಯ ಬಂದಿದೆ ಎಂದು ಶಿವಸೇನೆ(ಯುಬಿಟಿ) ಶನಿವಾರ ಹೇಳಿದೆ.
ಸಾಮಾಜಿಕ ಮಾಧ್ಯಮದಲ್ಲಿ ನಿಗೂಢ ಪೋಸ್ಟ್‌ನಲ್ಲಿ ಶಿವಸೇನೆ(ಯುಬಿಟಿ) ಈ ಹೇಳಿಕೆ ನೀಡಿದೆ.
"ಮುಂಬೈ ಮತ್ತು ಮಹಾರಾಷ್ಟ್ರದ ಹಿತಾಸಕ್ತಿಗಾಗಿ ಒಂದಾಗುವ ಸಮಯ ಬಂದಿದೆ. ಮರಾಠಿ 'ಅಸ್ಮಿತೆ'(ಹೆಮ್ಮೆ)ಯನ್ನು ರಕ್ಷಿಸಲು ಶಿವಸೈನಿಕರು ಸಿದ್ಧರಾಗಿದ್ದಾರೆ" ಎಂದು ಶಿವಸೇನೆ(ಯುಬಿಟಿ) ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಕಳೆದ ವಾರ, ರಾಜ್ ಠಾಕ್ರೆ ತಮ್ಮ ಸೋದರಸಂಬಂಧಿ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ರಾಜಕೀಯ ಹೊಂದಾಣಿಕೆಯ ಸಾಧ್ಯತೆಯ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದ್ದರು. ತಮ್ಮ ನಡುವಿನ ಹಿಂದಿನ ಭಿನ್ನಾಭಿಪ್ರಾಯಗಳು "ಕ್ಷುಲ್ಲಕ" ಮತ್ತು ಅವರೊಂದಿಗೆ ಕೆಲಸ ಮಾಡುವುದು ಕಷ್ಟವಲ್ಲ ಎಂದು ಅವರು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಉದ್ಧವ್ ಠಾಕ್ರೆ, ಮಹಾರಾಷ್ಟ್ರದ ಹಿತಾಸಕ್ತಿ ರಕ್ಷಿಸಲು ಕ್ಷುಲ್ಲಕ ಜಗಳಗಳನ್ನು ಬದಿಗಿಡಲು ಸಿದ್ಧ ಎಂದು ಹೇಳಿದ್ದರು.
ಇನ್ನು ಸೇನಾ(ಯುಬಿಟಿ) ಮತ್ತು ಎಂಎನ್‌ಎಸ್ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮಹಾರಾಷ್ಟ್ರ ಕಂದಾಯ ಸಚಿವ ಚಂದ್ರಶೇಖರ್ ಬವಾಂಕುಲೆ ಅವರನ್ನು ಕೇಳಿದಾಗ, "ಒಟ್ಟಾಗುವುದು ಅಥವಾ ಮೈತ್ರಿ ಮಾಡಿಕೊಳ್ಳುವುದು ಅವರ ವಿಶೇಷ ಹಕ್ಕು. ನಮಗೆ ಯಾವುದೇ ಸಮಸ್ಯೆ ಇಲ್ಲ" ಎಂದಿದ್ದರು.
Advertisement