
ನಾಡಿಯಾ: ಅಕ್ರಮವಾಗಿ ಭಾರತಕ್ಕೆ ಬಂದು ಸಾಧು ಸೋಗಿನಲ್ಲಿ ಪಶ್ಚಿಮ ಬಂಗಾಳದಲ್ಲಿ ತಲೆಮರೆಸಿಕೊಂಡಿದ್ದ ಬಾಂಗ್ಲಾದೇಶದ ಓರ್ವ ಕ್ರಿಮಿನಲ್ ನನ್ನು ನಾಡಿಯಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ದೊರೆತ ಖಚಿತ ಮಾಹಿತಿ ಆಧಾರದ ಮೇಲೆ ಸ್ಥಳೀಯ ಪೊಲೀಸರೊಂದಿಗೆ ಶನಿವಾರ ರಾತ್ರಿ ತೆಹಟ್ಟಾ ಪ್ರದೇಶದಲ್ಲಿ ದಾಳಿ ನಡೆಸಿದ ಪಶ್ಚಿಮ ಬಂಗಾಳದ STF ಪಡೆ ಆರೋಪಿಯನ್ನು ಬಂಧಿಸಿದೆ.
ಬಂಧಿತನನ್ನು 60 ವರ್ಷದ ಮೊಹಮ್ಮದ್ ಹಾಷೆಮ್ ಎಂದು ಗುರುತಿಸಲಾಗಿದೆ. ಈತ ಬಾಂಗ್ಲಾದೇಶದಲ್ಲಿ ಹಲವಾರು ಪ್ರಕರಣಗಳಲ್ಲಿ ವಾಂಟೆಡ್ ಆಗಿದ್ದು, ಹಶೀಮ್ ಅಲಿ ಮಲ್ಲಿಕ್ ಎಂದು ಹೆಸರಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ವಿಶೇಷ ಕಾರ್ಯಪಡೆಯ ಸಬ್ ಇನ್ಸ್‌ಪೆಕ್ಟರ್ ಮೊಹಮ್ಮದ್ ಅಬ್ದುನ್ ನೂರ್ ಚೌಧರಿ ಅವರು ನೀಡಿದ ದೂರಿನ ಆಧಾರದ ಮೇಲೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಹಾಷೇಮ್ ಬಾಂಗ್ಲಾದೇಶದಲ್ಲಿ ಘೋರ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಲಾಗಿದೆ. ಆತ ಭಾರತದ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ತೆಹಟ್ಟಾದ ಬಲಿಯುರಾ ಪುರ್ಬಾ ಪಾರಾದಲ್ಲಿ ತಲೆಮರೆಸಿಕೊಂಡಿದ್ದ. ಆತನ ಬಗ್ಗೆ ಮಾಹಿತಿ ಇತ್ತು. ಸ್ಥಳೀಯ ಪೊಲೀಸರ ಸಹಾಯದಿಂದ ದಾಳಿ ನಡೆಸಿ ಶನಿವಾರ ಸಂಜೆ ಬಂಧಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿ ಭಾರತದ ಮಾನ್ಯವಾದ ಗುರುತಿನ ದಾಖಲೆ ನೀಡುವಲ್ಲಿ ವಿಫಲನಾದ ನಂತರ ಬಂಧಿಸಲಾಯಿತು. ಪ್ರಾಥಮಿಕ ತನಿಖೆಯ ಸಮಯದಲ್ಲಿ ಬಾಂಗ್ಲಾದೇಶದಲ್ಲಿ ಮಾಡಿರುವ ಅಪರಾಧಗಳಿಗಾಗಿ ಅಲ್ಲಿನ ಕಾನೂನು ಪ್ರಕ್ರಿಯೆಗಳಿಂದ ತಪ್ಪಿಸಿಕೊಳ್ಳಲು ಭಾರತಕ್ಕೆ ಬಂದು ನೆಲೆಸಿರುವುದಾಗಿ ಆರೋಪಿ ಒಪ್ಪಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
Advertisement