
ನಾಗ್ಪುರ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರದ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಆದರೆ, ಅದು ಸುಳ್ಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆ ವ್ಯಕ್ತಿ ಬೆಳಿಗ್ಗೆ ನಗರ ಪೊಲೀಸ್ ನಿಯಂತ್ರಣ ಕೊಠಡಿಗೆ ತುರ್ತು ಸಂಖ್ಯೆ 112ಕ್ಕೆ ಕರೆ ಮಾಡಿ ಬೆದರಿಕೆಯೊಡ್ಡಿದ್ದು, ಅಧಿಕಾರಿಗಳನ್ನು ದಿಗ್ಭ್ರಮೆಗೊಳಿಸಿದೆ.
ತನಿಖೆ ಸಮಯದಲ್ಲಿ, ಕರೆ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಪತ್ತೆಹಚ್ಚಿದ್ದು, ನಾಗ್ಪುರ ನಗರದ ಸಕ್ಕರ್ದಾರ ಪ್ರದೇಶದ ವಿಮಾ ದವಾಖಾನಾ ಬಳಿಯ ತುಳಸಿ ಬಾಗ್ ರಸ್ತೆಯ ನಿವಾಸಿ ಉಮೇಶ್ ವಿಷ್ಣು ರಾವುತ್ ಎಂಬಾತ ಕರೆ ಮಾಡಿದ್ದಾಗಿ ತಿಳಿದುಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಮೊಬೈಲ್ ಲೊಕೇಶನ್ ಮತ್ತು ತಾಂತ್ರಿಕ ನೆರವಿನಿಂದ ಪೊಲೀಸರು ವಿಮಾ ದವಾಖಾನಾದ ಆವರಣದಿಂದ ರಾವುತ್ ಅವರನ್ನು ಬಂಧಿಸಿದ್ದಾರೆ. ವಿಚಾರಣೆಗಾಗಿ ಆತನನ್ನು ವಶಕ್ಕೆ ತೆಗೆದುಕೊಂಡು ನಂತರ ಅಪರಾಧ ವಿಭಾಗವು ಔಪಚಾರಿಕವಾಗಿ ಬಂಧಿಸಿತು. ರಾವುತ್ ಹಳ್ಳಿಯೊಂದರ ಮದ್ಯದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ' ಎಂದು ಅವರು ಹೇಳಿದರು.
ರಾವುತ್ ಹಳ್ಳಿಯೊಂದರ ಮದ್ಯದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಬಾಂಬ್ ಬೆದರಿಕೆ ಕರೆ ಕೇವಲ ಸುಳ್ಳು. ಸುಳ್ಳು ಬೆದರಿಕೆ ಹಿಂದಿನ ಉದ್ದೇಶ ಮತ್ತು ಆರೋಪಿ ಈ ಹಿಂದೆಯೂ ಇದೇ ರೀತಿಯ ದುಷ್ಕೃತ್ಯ ಎಸಗಿದ್ದಾರೆ ಎಂಬುದನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ರಾವುತ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement