
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಅವಶೇಷಗಳನ್ನು ತೆರವುಗೊಳಿಸುತ್ತಿದ್ದಾಗ ಬಂಡೆಯೊಂದು ಡಿಕ್ಕಿ ಹೊಡೆದು ಜೆಸಿಬಿ ಯಂತ್ರ ಮತ್ತು ಅದರ ಚಾಲಕ ಕಣಿವೆಗೆ ಉರುಳಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈಗಾಗಲೇ ಭಾರಿ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತದಂತಹ ನೈಸರ್ಗಿಕ ವಿಕೋಪಗಳಿಂದ ತತ್ತರಿಸಿ ಹೋಗಿರುವ ಹಿಮಾಚಲ ಪ್ರದೇಶದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಅವಶೇಷಗಳನ್ನು ತೆರವುಗೊಳಿಸುತ್ತಿದ್ದಾಗ ಬಂಡೆಯೊಂದು ಡಿಕ್ಕಿ ಹೊಡೆದು ಜೆಸಿಬಿ ಯಂತ್ರ ಮತ್ತು ಅದರ ಚಾಲಕ ಕಣಿವೆಗೆ ಉರುಳಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಶಿಮ್ಲಾ ಜಿಲ್ಲೆಯ ಕುಮಾರ್‌ಸೈನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 5 ರಲ್ಲಿ ಈ ಅವಘಡ ಸಂಭವಿಸಿದ್ದು, ಹೆದ್ದಾರಿಯಲ್ಲಿ ಸಂಭವಿಸಿದ ಭೂಕುಸಿತದ ಅವಶೇಷಗಳನ್ನು ತೆರವುಗೊಳಿಸುತ್ತಿದ್ದಾಗ ಬಂಡೆಯೊಂದು JCB ಯಂತ್ರಕ್ಕೆ ಡಿಕ್ಕಿ ಹೊಡೆದು ಆಳವಾದ ಕಂದಕಕ್ಕೆ ಉರುಳಿದೆ.
ಈ ವೇಳೆ ಡೋಜರ್ ಚಾಲಕ ಸಾವನ್ನಪ್ಪಿದ್ದಾನೆ. ಮೃತ ಚಾಲಕನನ್ನು ಮಂಡಿ ಜಿಲ್ಲೆಯ ಗುರ್ಕೋಥ ಗ್ರಾಮದ ನಿವಾಸಿ ದಿನೇಶ್ ಕುಮಾರ್ (54) ಎಂದು ಗುರುತಿಸಲಾಗಿದೆ.
ಕುಮಾರ್‌ಸೈನ್ ಬಳಿಯ ಜಬ್ಲಿ ಬಳಿ ರಸ್ತೆ ಮೇಲೆ ಬಿದ್ದಿದ್ದ ಮಣ್ಣು ಮತ್ತು ಕಲ್ಲಿನ ಅವಶೇಷಗಳನ್ನು ತೆರವುಗೊಳಿಸುವಾಗ ಜೆಸಿಬಿ (ವೀಲ್ ಡೋಜರ್) ಯಂತ್ರ ಅಪಘಾತಕ್ಕೀಡಾಯಿತು. ಈ ವೇಳೆ ಗುಡ್ಡದಿಂದ ಯಂತ್ರ ದಿಢೀರನೆ ಕಣಿವೆಗೆ ಉರುಳಿದ್ದು, ಚಾಲಕ ಕೂಡ ಕಣಿವೆಗೆ ಉರುಳಿ ಸಾವನ್ನಪ್ಪಿದ್ದಾರೆ.
ಕುಮಾರ್‌ಸೈನ್ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ತಲುಪಿ ಶವವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲು ಪ್ರಾರಂಭಿಸಿದ್ದಾರೆ.
ಆಗಿದ್ದೇನು?
ಶಾನಂದ್‌ನ ನಾಗ್ ತಿರುವಿನ ಬಳಿಯ ರಾಷ್ಟ್ರೀಯ ಹೆದ್ದಾರಿ-5 ರಲ್ಲಿ ಬೆಟ್ಟದಿಂದ ಬಂಡೆಗಳು ಬಿದ್ದ ಕಾರಣ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ರಸ್ತೆ ಸಂಚಾರ ನಿರ್ಬಂಧಿಸಲಾಗಿದೆ ಎಂದು ಎಸ್‌ಪಿ ಶಿಮ್ಲಾ ಸಂಜೀವ್ ಗಾಂಧಿ ಹೇಳಿದ್ದಾರೆ. ಬಂಡೆಗಳನ್ನು ತೆಗೆದು ಅಡಚಣೆಯಾದ ರಸ್ತೆಯನ್ನು ತೆರೆಯಲು ಜೆಸಿಬಿ ಯಂತ್ರದೊಂದಿಗೆ ಕೆಲಸ ನಡೆಯುತ್ತಿದೆ.
ಈ ಸಮಯದಲ್ಲಿ, ಇದ್ದಕ್ಕಿದ್ದಂತೆ ಬೆಟ್ಟದಿಂದ ದೊಡ್ಡ ಬಂಡೆ ಬಿದ್ದಿತು, ಅದು ಜೆಸಿಬಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಎಷ್ಟು ಬಲವಾಗಿತ್ತೆಂದರೆ ಜೆಸಿಬಿ ನಿಯಂತ್ರಣ ತಪ್ಪಿ ನೂರಾರು ಅಡಿ ಆಳದ ಕಂದಕಕ್ಕೆ ಬಿದ್ದಿತು. ಇದರಲ್ಲಿ ಚಾಲಕ ಸಾವನ್ನಪ್ಪಿದರು. ಅಪಘಾತದ ಸಮಯದಲ್ಲಿ, ಹೆದ್ದಾರಿಯ ಎರಡೂ ಬದಿಗಳಲ್ಲಿ ವಾಹನಗಳ ಉದ್ದನೆಯ ಸಾಲುಗಳು ಇದ್ದವು.
Advertisement