
ನವದೆಹಲಿ: ವಿವಾದಾತ್ಮಕ ಹೇಳಿಕೆಗಳಿಂದಲೇ ಆಗಾಗ್ಗೆ ಸುದ್ದಿಯಾಗುವ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಈಗ ಮತ್ತೊಂದು ಹೊಸ ವಿವಾದ ಸೃಷ್ಟಿಸಿದ್ದಾರೆ.
ಪಹಲ್ಗಾಮ್ ದಾಳಿ ಬಳಿಕ ಸರ್ವ ಪಕ್ಷ ನಿಯೋಗ ಎಲ್ಲಾ ದೇಶಗಳಿಗೂ ಪಾಕ್ ಭಯೋತ್ಪಾದನೆ ಬಗ್ಗೆ ಏನೇ ಹೇಳಿಬಂದರೂ ಯಾವುದೇ ದೇಶವು ಪಾಕಿಸ್ತಾನವನ್ನು ದೂಷಿಸಿಲ್ಲ ಎಂದು ಹೇಳಿದ್ದಾರೆ.
ಶಶಿ ತರೂರ್ ಮತ್ತು ಇತರ ಸಂಸದರು ಭೇಟಿ ನೀಡಿದ 33 ದೇಶಗಳಲ್ಲಿ ಪಹಲ್ಗಾಮ್ ದಾಳಿಗೆ ಪಾಕಿಸ್ತಾನವನ್ನು ಯಾರೂ ಹೊಣೆಗಾರರನ್ನಾಗಿ ಮಾಡಿಲ್ಲ ಎಂದಿದ್ದಾರೆ.
ಅಮೆರಿಕ ಅಥವಾ ವಿಶ್ವಸಂಸ್ಥೆ ಕೂಡಾ ಪಾಕಿಸ್ತಾನ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ಅದಕ್ಕೆ ಪಾಕಿಸ್ತಾನವೇ ಕಾರಣ ಎಂದು ಎದೆಬಡಿದುಕೊಳ್ಳುತ್ತಿರುವವರು ನಾವು ಮಾತ್ರ ಎಂದು ಅಯ್ಯರ್ ಸುದ್ದಿಸಂಸ್ಥೆ IANS ಜೊತೆಗೆ ಮಾತನಾಡುತ್ತಾ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ನಮ್ಮ ಮಾತನ್ನು ಯಾರೂ ನಂಬುವುದಿಲ್ಲ. ಪಹಲ್ಗಾಮ್ ದಾಳಿಗೆ ಪಾಕಿಸ್ತಾನ ಸಂಚು ರೂಪಿಸಿದೆ ಎಂದು ಜಗತ್ತಿಗೆ ಮನವರಿಕೆ ಮಾಡುವ ಯಾವುದೇ ಪುರಾವೆಗಳು ನಮ್ಮ ಬಳಿ ಇಲ್ಲ ಎಂದು ಅವರು ಹೇಳಿದ್ದಾರೆ.
ಆದರೆ ಮಣಿಶಂಕರ್ ಅಯ್ಯರ್ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. ಈ ಹೇಳಿಕೆಗೆ ಗಮನ ನೀಡುವುದಿಲ್ಲ. ಅವರು ರಾಷ್ಟ್ರವನ್ನು ಹಾದಿ ತಪ್ಪಿಸುತ್ತಿದ್ದಾರೆ. ಅವರು ಕಾಂಗ್ರೆಸ್ ಸದಸ್ಯರಲ್ಲ ಎಂದು ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
Advertisement