
ನವದೆಹಲಿ: 'ಆಪರೇಷನ್ ಸಿಂಧೂರ್' ವೇಳೆ ಪಾಕಿಸ್ತಾನದ ಮಿಲಿಟರಿ ನೆಲೆಗಳಿಗೆ ಗಮನಾರ್ಹ ಹಾನಿಯನ್ನುಂಟು ಮಾಡಿದ ಬ್ರಹ್ಮೋಸ್ ಸೂಪರ್ ಸಾನಿಕ್ ಖಂಡಾಂತರ ಕ್ಷಿಪಣಿಗಳಿಗೆ ಭಾರತೀಯ ಪಡೆಗಳು ಮೆಗಾ ಆರ್ಡರ್ ನೀಡುತ್ತಿವೆ.
ಉನ್ನತ ಮಟ್ಟದ ರಕ್ಷಣಾ ಸಚಿವಾಲಯದ ಸಭೆಯು ಭಾರತೀಯ ವಾಯುಪಡೆಯ ಜೊತೆಗೆ ಭಾರತೀಯ ನೌಕಾಪಡೆಯ ಯುದ್ಧನೌಕೆಗಳಿಗೆ ಹೆಚ್ಚಿನ ಸಂಖ್ಯೆಯ ಬ್ರಹ್ಮೋಸ್ ಕ್ಷಿಪಣಿಗಳ ಖರೀದಿಗೆ ಅನುಮತಿ ನೀಡುವ ನಿರೀಕ್ಷೆಯಿದೆ ಎಂದು ಉನ್ನತ ರಕ್ಷಣಾ ಮೂಲಗಳು ಸುದ್ದಿಸಂಸ್ಥೆ ANIಗೆ ತಿಳಿಸಿವೆ.
ಭಾರತ ಮತ್ತು ರಷ್ಯಾ ಜಂಟಿಯಾಗಿ ಬ್ರಹ್ಮೋಸ್ ಕ್ಷಿಪಣಿ ಅಭಿವೃದ್ಧಿಪಡಿಸಿವೆ. ನಾಲ್ಕು ದಿನಗಳ ಸೇನಾ ಸಂಘರ್ಷದ ವೇಳೆಯಲ್ಲಿ ಪಾಕಿಸ್ತಾನದ ವಾಯುನೆಲೆಗಳು ಮತ್ತು ಸೇನಾ ಕಂಟೋನ್ಮೆಂಟ್ ಧ್ವಂಸಕ್ಕೆ ಈ ಕ್ಷಿಪಣಿಗಳನ್ನು ದೊಡ್ಡ ಮಟ್ಟದಲ್ಲಿ ಬಳಸಲಾಗಿತ್ತು.
ಭಾರತೀಯ ವಾಯುಪಡೆಯು ರಷ್ಯಾ ಮೂಲದ Su-30 MKI ಯುದ್ದ ವಿಮಾನಗಳಿಗಾಗಿ ಈ ಕ್ಷಿಪಣಿ ಬಳಸುತ್ತಿದ್ದರೆ, ನೌಕಾಪಡೆಯು ತನ್ನ ವೀರ್-ವರ್ಗದ ಯುದ್ಧನೌಕೆಗಳನ್ನು ಸಜ್ಜುಗೊಳಿಸಲು ಕ್ಷಿಪಣಿಗಳನ್ನು ಬಳಸುತ್ತದೆ ಮತ್ತು ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಸೇನಾ ಸಂಘರ್ಷದಲ್ಲಿ ಸ್ವದೇಶಿ ಶಸ್ತ್ರಾಸ್ತ್ರ ವ್ಯವಸ್ಥೆಗಳ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದರು. ಆಪರೇಷನ್ ಸಿಂಧೂರ್ ವೇಳೆ ಜಗತ್ತು ನಮ್ಮ ದೇಶೀಯ ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ನೋಡಿದೆ. ನಮ್ಮ ವಾಯು ರಕ್ಷಣಾ ವ್ಯವಸ್ಥೆಗಳು, ಕ್ಷಿಪಣಿಗಳು ಮತ್ತು ಡ್ರೋನ್ ಗಳು ವಿಶೇಷವಾಗಿ ಬ್ರಹ್ಮೋಸ್ ಕ್ಷಿಪಣಿಗಳು 'ಆತ್ಮನಿರ್ಭರ್ ಭಾರತದ ಶಕ್ತಿಯನ್ನು ಸಾಬೀತುಪಡಿಸಿವೆ ಎಂದು ಕೊಂಡಾಡಿದ್ದರು.
ಸಂಘರ್ಷದ ಮೊದಲ ಹಂತದಲ್ಲಿ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಜೈಶ್ ಇ ಮೊಹಮ್ಮದ್ ಮತ್ತು ಲಷ್ಕರ್ ಇ ತೋಯ್ಬಾದ ಭಯೋತ್ಪಾದಕ ಪ್ರಧಾನ ಕಚೇರಿ ಸೇರಿದಂತೆ ಪಾಕಿಸ್ತಾನದ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಭಾರತ ದಾಳಿ ನಡೆಸಿದಾಗ ಭಾರತೀಯ ವಾಯುಪಡೆಗೆ ಬ್ರಹ್ಮೋಸ್ ಕ್ಷಿಪಣಿ ಪ್ರಮುಖ ಅಸ್ತ್ರವಾಗಿತ್ತು.
ಇದು ಗುರಿಗಳನ್ನು ನಿಖರವಾಗಿ ಹೊಡೆಯುತ್ತದೆ. ಬ್ರಹ್ಮೋಸ್ ಪಾಕಿಸ್ತಾನದ ವಾಯುನೆಲೆಗಳಿಗೆ ಮತ್ತಷ್ಟು ಹಾನಿಯನ್ನುಂಟುಮಾಡಿತ್ತು. ಹಾಗಾಗೀ ಪಾಕಿಸ್ತಾನ ಸೇನೆಯು ಪ್ರತೀಕಾರದ ಕ್ರಮವಾಗಿ ಭಯೋತ್ಪಾದಕರು ಮತ್ತು ಅವರ ಮೂಲಸೌಕರ್ಯಗಳನ್ನು ರಕ್ಷಿಸಿತು.
Advertisement