
ಅಜೆರ್‌ಬೈಜಾನ್: ಮೇ 9-10ರ ಮಧ್ಯರಾತ್ರಿಯಲ್ಲಿ ರಾವಲ್ಪಿಂಡಿ ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಮಿಲಿಟರಿ ನೆಲೆಗಳ ಮೇಲೆ ಭಾರತ ಬ್ರಹ್ಮೋಸ್ ಕ್ಷಿಪಣಿ ದಾಳಿ ನಡೆಸುವುದು ತನ್ನ ಸೇನೆಯ ಅರಿವಿಗೆ ಬಂದಿರಲಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಒಪ್ಪಿಕೊಂಡಿದ್ದಾರೆ.
ಎಡವಿದ್ದೆಲ್ಲಿ?
ಅಜೆರ್‌ಬೈಜಾನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಷರೀಫ್, ಕೆಲವು ರಾಷ್ಟ್ರಗಳ ಬೆಂಬಲದೊಂದಿಗೆ ಅಸಿಮ್ ಮುನೀರ್ ನೇತೃತ್ವದ ಸೇನೆಯು ಮೇ 10 ರಂದು ಬೆಳಗಿನ ಪ್ರಾರ್ಥನೆಯ ನಂತರ ಭಾರತದ ಮೇಲೆ ದಾಳಿ ಮಾಡಲು ಯೋಜಿಸಿತ್ತು. ಆದರೆ, ಬೆಳಗಾಗುವ ಮುನ್ನವೇ ಪಾಕಿಸ್ತಾನದ ವಿವಿಧ ಪ್ರಾಂತ್ಯಗಳ ಮೇಲೆ ದೀರ್ಘ-ಶ್ರೇಣಿಯ ಸೂಪರ್‌ಸಾನಿಕ್ ಬ್ರಹ್ಮೋಸ್ ಕ್ಷಿಪಣಿಗಳ ದಾಳಿ ನಡೆಯಿತು. ಮುಂಜಾನೆ ದಾಳಿಯ ಬಗ್ಗೆ ಮುನೀರ್ ನನಗೆ ತಿಳಿಸಿದ್ದರು ಎಂದು ಪ್ರಧಾನಿ ಹೇಳಿದರು.
ಬೆಳಗಿನ ಪ್ರಾರ್ಥನೆ ನಂತರ ದಾಳಿಗೆ ಸಜ್ಜಾಗಿದ್ದ ಸೇನೆ:
ಮೇ 9-10ರ ರಾತ್ರಿ ಭಾರತದ ಆಕ್ರಮಣಕ್ಕೆ ತಕ್ಕ ಪ್ರತ್ಯುತ್ತರ ನೀಡಲು ನಿರ್ಧರಿಸಿದ್ದೇವು. ನಮ್ಮ ಸಶಸ್ತ್ರ ಪಡೆಗಳು ಬೆಳಗ್ಗೆ 4.30ಕ್ಕೆ ಫಜ್ರ್ ಪ್ರಾರ್ಥನೆಯ ನಂತರ ಪಾಠ ಕಲಿಸಲು ಸಜ್ಜಾಗಿದ್ದವು. ಆದರೆ ಅದಕ್ಕೂ ಮುನ್ನವೇ ಭಾರತ ರಾವಲ್ಪಿಂಡಿ ವಿಮಾನ ನಿಲ್ದಾಣ ಸೇರಿದಂತೆ ಪಾಕಿಸ್ತಾನದ ವಿವಿಧಡೆ ಮತ್ತೊಮ್ಮೆ ಬ್ರಹ್ಮೋಸ್ ಬಳಸಿ ಕ್ಷಿಪಣಿ ದಾಳಿ ನಡೆಸಿತು ಎಂದು ತಿಳಿಸಿದರು.
11 ವಾಯುನೆಲೆಗಳಲ್ಲಿ ನಿಖರ ದಾಳಿ:
ಅಸಿಮ್ ಮುನೀರ್ ಅವರ ಸಮ್ಮುಖದಲ್ಲಿಯೇ ಭಾರತದ ಮಿಲಿಟರಿ ದಾಳಿಯನ್ನು ಪಾಕ್ ಪ್ರಧಾನಿ ಒಪ್ಪಿಕೊಂಡಿದ್ದಾರೆ. ವಾಸ್ತವವಾಗಿ ಪಶ್ಚಿಮ ಗಡಿಯುದ್ದಕ್ಕೂ ನಾಗರಿಕ ಪ್ರದೇಶಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದ್ದ ಪಾಕಿಸ್ತಾನಕ್ಕೆ ಪ್ರತಿಕ್ರಿಯೆಯಾಗಿ ಭಾರತವು ಗುರಿಯಾಗಿಸಿಕೊಂಡ 11 ವಾಯು ನೆಲೆಗಳಲ್ಲಿ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯೂ ಸೇರಿದೆ.
ಪಾಕಿಸ್ತಾನದ ಸೇನಾ ಪ್ರಧಾನ ಕಛೇರಿಯಿಂದ ಸ್ವಲ್ಪ ದೂರದಲ್ಲಿರುವ ವಾಯುನೆಲೆಯು ಲಾಕ್‌ಹೀಡ್ C-130 ಹರ್ಕ್ಯುಲಸ್ ಮತ್ತು ಇಲ್ಯುಶಿನ್ Il-78 ಇಂಧನ ತುಂಬಿಸುವಂತಹ ಉನ್ನತ ಶ್ರೇಣಿಯ ಮಿಲಿಟರಿ ವಿಮಾನಗಳನ್ನು ಹೊಂದಿದೆ. ಸ್ಯಾಟ ಲೈಟ್ ಇಮೇಜ್ ಗಳಲ್ಲಿ ಎರಡು ಮಿಲಿಟರಿ ಸಾರಿಗೆ ವಾಹನಗಳಿಗೆ ಹಾನಿಯನ್ನು ತೋರಿಸುತ್ತದೆ.
ನೂರ್ ಖಾನ್ ಅಲ್ಲದೇ ರಫೀಕಿ, ಮುರಿದ್, ರಹೀಮ್ ಯಾರ್ ಖಾನ್, ಸುಕ್ಕೂರ್ ಮತ್ತು ಚುನಿಯನ್‌ನಲ್ಲಿ ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ಭಾರತ ದಾಳಿ ಮಾಡಿದೆ. ಭೋಲಾರಿ, ಜಾಕೋಬಾಬಾದ್ ಮತ್ತು ಸರ್ಗೋಧಾ ವಾಯುನೆಲೆಯಲ್ಲಿ ವ್ಯಾಪಕ ಹಾನಿಯಾಗಿದೆ. ಭಾರತವು Su-30MKI ಜೆಟ್‌ಗಳಿಂದ ಸುಮಾರು 15 ಬ್ರಹ್ಮೋಸ್ ಕ್ಷಿಪಣಿಗಳು ವಾಯುನೆಲೆಗಳ ಮೇಲೆ ನಿಖರವಾಗಿ ದಾಳಿ ನಡೆಸಿರುವುದು ಸ್ಯಾಟಲೈಟ್ ಫೋಟೋಗಳಿಂದ ದೃಢಪಟ್ಟಿದೆ.
Advertisement