
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಏರ್ ಇಂಡಿಯಾ, ಇಂಡಿಗೋ ಸೇರಿದಂತೆ ಹಲವು ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡುಬಂದು ಹಾರಾಟ ಸ್ಥಗಿತಗೊಳ್ಳುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಈ ಕುರಿತು ಇಂದು ಸರ್ಕಾರವೇ ಅಧಿಕೃತ ಮಾಹಿತಿ ನೀಡಿದೆ.
ಈ ವರ್ಷ ಜುಲೈ 21 ರವರೆಗೆ ವಿಮಾನಗಳಲ್ಲಿ 190 ತಾಂತ್ರಿಕ ದೋಷಗಳನ್ನು ವಿಮಾನಯಾನ ಸಂಸ್ಥೆಗಳು ವರದಿ ಮಾಡಿರುವುದಾಗಿ ತಿಳಿಸಿದೆ.
ವಿಮಾನಗಳಲ್ಲಿ ತಾಂತ್ರಿಕ ತೊಂದರೆಗಳು ಸಾಮಾನ್ಯ ವಿದ್ಯಮಾನಗಳಾಗಿವೆ. ವಿಮಾನಗಳಲ್ಲಿ ಅಳವಡಿಸಲಾದ ಸಿಸ್ಟಮ್, ಸಲಕರಣೆಗಳು ಮತ್ತಿತರ ಅಸಮರ್ಪಕ ಕಾರ್ಯದಿಂದ ಇದು ಉಂಟಾಗಬಹುದು ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ವಿಮಾನ ಹಾರಾಟಕ್ಕೂ ಮುನ್ನಾ ಎಲ್ಲಾ ತಾಂತ್ರಿಕ ಜವಾಬ್ದಾರಿ ಸರಿಪಡಿಸುವ ಜವಾಬ್ದಾರಿ ಏರ್‌ಲೈನ್‌ಗಳ ಮೇಲಿದೆ. ಅವರೇ ಹಂಚಿಕೊಂಡ ಮಾಹಿತಿಯ ಪ್ರಕಾರ, ಈ ವರ್ಷ ಜುಲೈ 21 ರವರೆಗೆ 190 ತಾಂತ್ರಿಕ ದೋಷಗಳನ್ನು ವರದಿ ಮಾಡಿವೆ. 2024ರಲ್ಲಿ ಇದು 421 ರಷ್ಟಿತ್ತು ಎಂದು ಸಚಿವರು ತಿಳಿಸಿದ್ದಾರೆ.
ವಿಮಾನಯಾನ ಸಂಸ್ಥೆಗಳು ಮತ್ತು ಅದರ ಸಿಬ್ಬಂದಿ ಕಣ್ಗಾವಲು, ಸ್ಪಾಟ್ ಚೆಕ್ ಕಾರ್ಯ ವಿಧಾನದ ಮೂಲಕ ಎಲ್ಲಾ ಸುರಕ್ಷತೆ ಮತ್ತು ನಿರ್ವಹಣಾ ಮಾನದಂಡಗಳೊಂದಿಗೆ ವಿಮಾನ ಹಾರಾಟಕ್ಕೆ ಖಾತ್ರಿ ನೀಡಬೇಕಾಗಿದೆ. ಒಂದು ವೇಳೆ ನಿಯಮಗಳ ಉಲ್ಲಂಘನೆಯಾದಲ್ಲಿ ಸಂಬಂಧಿತ ಏರ್ ಲೈನ್ಸ್ ಮತ್ತು ಸಿಬ್ಬಂದಿ ವಿರುದ್ಧ ದಂಡ ಸೇರಿದಂತೆ ಅಮಾನತು ಮತ್ತಿತರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.
Advertisement