
ನವದೆಹಲಿ: ರೆಸ್ಟೋರೆಂಟ್‌ನಲ್ಲಿ ಚೂಡಿದಾರ್ ಧರಿಸಿಕೊಂಡು ಬಂದಿದ್ದಕ್ಕೆ ಮಹಿಳೆಗೆ ಪ್ರವೇಶ ನಿಷೇಧಿಸಿರುವ ಘಟನೆ ವರದಿಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ನಾಚಿಕೆಗೇಡಿನ ಘಟನೆ ವರದಿಯಾಗಿದ್ದು, ದೆಹಲಿಯ ಪಿತಾಂಪುರದಲ್ಲಿರುವ Tubata ರೆಸ್ಟೋರೆಂಟ್ ಸಿಬ್ಬಂದಿ ಚೂಡಿದಾರ್ ಧರಿಸಿ ಪತಿಯೊಂದಿಗೆ ಬಂದಿದ್ದ ಮಹಿಳೆಗೆ ಪ್ರವೇಶ ನಿರಾಕರಿಸಿ ಇದೀಗ ವಿವಾದಕ್ಕೆ ಗ್ರಾಸವಾಗಿದೆ.
ಈ ಕುರಿತು ಸ್ವತಃ ದಂಪತಿ ವಿಡಿಯೋ ಮಾಡಿ ತಮಗಾದ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ರೆಸ್ಟೋರೆಂಟ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಪಿತಂಪುರದಲ್ಲಿರುವ ಟುಬಾಟ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಆಗಸ್ಟ್ 3ರಂದು ಈ ಘಟನೆ ನಡೆದಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಪುರುಷ ಟೀ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದರೆ, ಮಹಿಳೆ ಸಲ್ವಾರ್-ಕಮೀಜ್ ಧರಿಸಿದ್ದಾರೆ. 'ಪಾಶ್ಚಿಮಾತ್ಯ ಉಡುಗೆ ತೊಟ್ಟವ್ರನ್ನ ಒಳಗೆ ಬಿಟ್ಟು ನಮ್ಮ ದೇಸಿ ಉಡುಗೆಗೆ ನೋ ಎಂಟ್ರಿ ಅಂದ್ರು' ಅಂತ ದಂಪತಿ ಆರೋಪಿಸಿದ್ದಾರೆ. 'ಈ ಡ್ರೆಸ್ ಕೆಟ್ಟದ್ದಾ?' ಅಂತ ವಿಡಿಯೋದಲ್ಲಿ ಕಾಣಿಸುತ್ತಿರುವ ವ್ಯಕ್ತಿ ರೆಸ್ಟೋರೆಂಟ್ ಸಿಬ್ಬಂದಿಯನ್ನು ಪ್ರಶ್ನಿಸುತ್ತಿದ್ದಾರೆ.
'ನಮ್ಮನ್ನ ಒಳಗೆ ಬಿಡಲಿಲ್ಲ. ಆದ್ರೆ ಶಾರ್ಟ್ಸ್ ಹಾಕಿದವ್ರನ್ನ ಒಳಗೆ ಬಿಡ್ತಾರೆ. ಈ ರೆಸ್ಟೋರೆಂಟ್‌ಗೆ ಕಾಲು ತೋರಿಸೋರನ್ನ ಮಾತ್ರ ಒಳಗೆ ಬಿಡ್ತಾರಾ?' ಅಂತ ವಿಡಿಯೋ ತೆಗೆದವರು ಪ್ರಶ್ನಿಸಿದ್ದಾರೆ. 'ನಮ್ಮ ರಾಷ್ಟ್ರಪತಿ, ದೆಹಲಿ ಸಿಎಂ ಸೀರೆ ಉಟ್ಕೊಂಡು ಬಂದ್ರೆ ಅವ್ರಿಗೂ ನೋ ಎಂಟ್ರಿ ಅಂತೀರಾ?' ಅಂತ ವ್ಯಕ್ತಿ ಹೇಳಿದ್ದಾರೆ.
ಪ್ರತಿಕ್ರಿಯಿಸಿದ ದೆಹಲಿ ಸರ್ಕಾರ
ಇನ್ನುವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಕುರಿತು ದೆಹಲಿ ಸರ್ಕಾರ ಪ್ರತಿಕ್ರಿಯೆ ನೀಡಿದೆ. ಈ ಕುರಿತು ಟ್ವೀಟ್ ಮಾಡಿರುವ ದೆಹಲಿ ಸಚಿವ ಕಪಿಲ್ ಮಿಶ್ರಾ, 'ಇನ್ಮೇಲೆ ಡ್ರೆಸ್ ಕೋಡ್ ಆಧಾರದ ಮೇಲೆ ಯಾವುದೇ ನಿರ್ಬಂಧ ಇರಲ್ಲ. ಭಾರತೀಯ ಉಡುಗೆ ತೊಟ್ಟವ್ರನ್ನೂ ಸ್ವಾಗತಿಸ್ತೇವೆ ಅಂತ ರೆಸ್ಟೋರೆಂಟ್ ಒಪ್ಪಿಕೊಂಡಿದೆ' ಎಂದು ಹೇಳಿದ್ದಾರೆ.
ಅಂತೆಯೇ "ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಘಟನೆಯ ತನಿಖೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದು ಮಿಶ್ರಾ ಬರೆದಿದ್ದಾರೆ.
Advertisement