
ಮೋರ್ಬಿ: ಗುಜರಾತ್‌ನ ಮೋರ್ಬಿ ಜಿಲ್ಲೆಯ ಹೆದ್ದಾರಿಯಲ್ಲಿ ಎರಡು ಭಾರೀ ವಾಹನಗಳು ಮತ್ತು ಒಂದು ಕಾರು ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸುಟ್ಟು ಕರಕಲಾದ ಘಟನೆ ಶುಕ್ರವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಹರಿಪರ್ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಂಗ್ ಸೈಡ್ ನಿಂದ ಹೆದ್ದಾರಿಗೆ ಪ್ರವೇಶಿಸಿದ ಕಂಟೇನರ್, ಟ್ರಕ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ, ಬೆಂಕಿ ಹೊತ್ತಿಕೊಂಡಿತು ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ತ್ರಿಪಾಠಿ ಅವರು ಹೇಳಿದ್ದಾರೆ.
"ಪಕ್ಕದಲ್ಲಿ ಹೋಗುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ನಂತರ ಕಾರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಡಿಕ್ಕಿಯಲ್ಲಿ ಟ್ರಕ್ ಕೂಡ ಬೆಂಕಿಗೆ ಆಹುತಿಯಾಗಿದೆ. ನಾಲ್ವರು ಸಜೀವ ದಹನವಾಗಿದ್ದಾರೆ" ಎಂದು ಅವರು ತಿಳಿಸಿದ್ದಾರೆ.
ಮೃತರಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಮತ್ತು ಟ್ರಕ್‌ನಲ್ಲಿದ್ದ ಇಬ್ಬರು ಪ್ರಯಾಣಿಕರು ಸೇರಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
"ಜುನಾಗಢದ ಬೋರ್ಡಿಂಗ್ ಶಾಲೆಯ ವಿದ್ಯಾರ್ಥಿಗಳು ಕಚ್ ಜಿಲ್ಲೆಯ ತಮ್ಮ ಊರುಗಳಿಗೆ ಪ್ರಯಾಣಿಸುತ್ತಿದ್ದರು" ಎಂದು ತ್ರಿಪಾಠಿ ಹೇಳಿದರು.
"ಇತರ ಏಳು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ" ಎಂದು ಮೋರ್ಬಿ ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತರನ್ನು ಕಾರು ಪ್ರಯಾಣಿಕರಾದ ರುದ್ರ ಗುಜಾರಿಯಾ(15), ಜಮಿನ್ ಬಬಾರಿಯಾ (17) ಮತ್ತು ರಾಜಸ್ಥಾನದ ಬಿಕಾನೇರ್ ನಿವಾಸಿ ಶಿವರಾಮ್ ನಾಯ್ ಗುರುತಿಸಲಾಗಿದ್ದು, ಇನ್ನೊಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಮಾಲಿಯಾ ಮಿಯಾನಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement