
ನವದೆಹಲಿ: ರಾಹುಲ್ ಗಾಂಧಿ ಮಾಡಿರುವ ಚುನಾವಣಾ ಅಕ್ರಮಗಳ ಆರೋಪಗಳನ್ನು ಉಲ್ಲೇಖಿಸಿದ ಕಾಂಗ್ರೆಸ್ ನಾಯಕ ಶಶಿ ತರೂರ್, ಇವು 'ಗಂಭೀರ ಪ್ರಶ್ನೆಗಳು', ಇವುಗಳನ್ನು ಎಲ್ಲ ಮತದಾರರ ಹಿತದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಬೇಕು ಮತ್ತು ಚುನಾವಣಾ ಆಯೋಗವು ತುರ್ತಾಗಿ ಕಾರ್ಯನಿರ್ವಹಿಸಬೇಕು ಎಂದು ಶುಕ್ರವಾರ ಒತ್ತಾಯಿಸಿದರು.
ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ ಅವರು, 'ಅಮೂಲ್ಯವಾದ ಪ್ರಜಾಪ್ರಭುತ್ವವನ್ನು ತಪ್ಪುಗಳು ಮತ್ತು ಉದ್ದೇಶಪೂರ್ವಕ ಹಾನಿ ಎರಡರಿಂದಲೂ ರಕ್ಷಿಸಬೇಕು' ಎಂದು ಹೇಳಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು 'ಭಾರಿ ಕ್ರಿಮಿನಲ್ ವಂಚನೆ' ನಡೆದಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ಪೋಸ್ಟ್ ಅನ್ನು ಟ್ಯಾಗ್ ಮಾಡಿರುವ ತರೂರ್, ಇವು 'ಗಂಭೀರ ಪ್ರಶ್ನೆಗಳು', ಇವುಗಳನ್ನು ಎಲ್ಲ ಪಕ್ಷಗಳು ಮತ್ತು ಎಲ್ಲ ಮತದಾರರ ಹಿತದೃಷ್ಟಿಯಿಂದ ಗಂಭೀರವಾಗಿ ಪರಿಹರಿಸಬೇಕು' ಎಂದು ಹೇಳಿದರು.
'ನಮ್ಮ ಪ್ರಜಾಪ್ರಭುತ್ವವು ತುಂಬಾ ಅಮೂಲ್ಯವಾದದ್ದು. ಅಸಮರ್ಥತೆ, ಅಜಾಗರೂಕತೆ ಅಥವಾ ಕೆಟ್ಟದಾಗಿ, ಉದ್ದೇಶಪೂರ್ವಕ ಅಕ್ರಮಗಳಿಂದ ಅದರ ವಿಶ್ವಾಸಾರ್ಹತೆ ನಾಶವಾಗಲು ಅವಕಾಶ ನೀಡಬಾರದು. ಚುನಾವಣಾ ಆಯೋಗ ತುರ್ತಾಗಿ ಕಾರ್ಯನಿರ್ವಹಿಸಬೇಕು ಮತ್ತು ಆಯೋಗದ ವಕ್ತಾರರು ಈ ಕುರಿತು ರಾಷ್ಟ್ರಕ್ಕೆ ಮಾಹಿತಿ ನೀಡಬೇಕು' ಎಂದು ತರೂರ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಆಪರೇಷನ್ ಸಿಂಧೂರ ಸೇರಿದಂತೆ ಕೆಲವು ವಿಷಯಗಳ ಬಗ್ಗೆ ಪಕ್ಷದ ನಿಲುವಿನೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ತರೂರ್ ಇದೀಗ ರಾಹುಲ್ ಗಾಂಧಿ ಮಾಡಿರುವ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಕ್ರಮ ಕೈಗೊಳ್ಳಬೇಕೆಂದು ಹೇಳಿರುವುದು ಮಹತ್ವ ಪಡೆದುಕೊಂಡಿವೆ.
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಮಾರಣಾಂತಿಕ ಉಗ್ರ ದಾಳಿಯ ನಂತರ ಭಯೋತ್ಪಾದನೆ ಬಗ್ಗೆ ಭಾರತದ ಶೂನ್ಯ-ಸಹಿಷ್ಣುತೆಯ ನಿಲುವನ್ನು ತಿಳಿಸಲು ಅಮೆರಿಕ ಮತ್ತು ಇತರ ದೇಶಗಳಿಗೆ ರಾಜತಾಂತ್ರಿಕ ನಿಯೋಗದ ನೇತೃತ್ವ ವಹಿಸಲು ಕೇಂದ್ರ ಸರ್ಕಾರ ತರೂರ್ ಅವರನ್ನು ಆಯ್ಕೆ ಮಾಡಿದ ನಂತರ ಕಾಂಗ್ರೆಸ್ ಜೊತೆಗಿನ ಭಿನ್ನಾಭಿಪ್ರಾಯ ಬಹಿರಂಗಗೊಂಡಿದ್ದವು.
ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಬಿಜೆಪಿಯೊಂದಿಗಿನ ಚುನಾವಣಾ ಆಯೋಗದ ಮೈತ್ರಿಯು ಸಂವಿಧಾನದ ವಿರುದ್ಧದ ಅಪರಾಧವಾಗಿದೆ. ಈ ಮೂಲಕ ಚುನಾವಣೆಯಲ್ಲಿ 'ದೊಡ್ಡ ಕ್ರಿಮಿನಲ್ ವಂಚನೆ' ನಡೆದಿದೆ ಎಂದು ಸ್ಫೋಟಕ ಹೇಳಿಕೆ ನೀಡಿದರು.
'ನಾವು ತುಂಬಾ ಪ್ರೀತಿಸುವ ಪ್ರಜಾಪ್ರಭುತ್ವವು ಅಸ್ತಿತ್ವದಲ್ಲಿಲ್ಲ'. ಕಾಂಗ್ರೆಸ್ ಪಕ್ಷವು ವೋಟ್ ಚೋರಿ (ಮತಗಳ್ಳತನ) ಕುರಿತು ಸದೃಢ ಮತ್ತು ಕ್ರಿಮಿನಲ್ ಸಾಕ್ಷ್ಯಗಳನ್ನು ಕಲೆಹಾಕಿದೆ. ಆದರೆ, ಚುನಾವಣಾ ಆಯೋಗವು ಅದನ್ನು ನಾಶಪಡಿಸುವಲ್ಲಿ ವ್ಯಸ್ತವಾಗಿದೆ. ಈಗ ನ್ಯಾಯಾಂಗ ಈ ವಿಷಯದಲ್ಲಿ ಮಧ್ಯೆಪ್ರವೇಶಿಸಬೇಕು ಎಂದು ಒತ್ತಾಯಿಸಿದರು.
Advertisement