
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಜೈತ್‌ಪುರದ ಹರಿ ನಗರ ಪ್ರದೇಶದಲ್ಲಿ ಗೋಡೆಯ ಒಂದು ಭಾಗ ಕುಸಿದು ಇಬ್ಬರು ಮಕ್ಕಳು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದಾರೆ.
ಮೃತ ದುರ್ದೈವಿಗಳು ಹಳೆಯ ದೇವಾಲಯದ ಬಳಿ ತಾತ್ಕಾಲಿಕ ಶೆಲ್ಟರ್ ಗಳಲ್ಲಿ ವಾಸಿಸುತ್ತಿದ್ದರು. ಪಕ್ಕದ ಗೋಡೆ ಇದ್ದಕ್ಕಿದ್ದಂತೆ ಕುಸಿದಾಗ ಅವಶೇಷಗಳಡಿ ಸಿಕ್ಕಿಹಾಕಿಕೊಂಡರು. ರಕ್ಷಣಾ ತಂಡ, ತಕ್ಷಣ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಸಫ್ದರ್ಜಂಗ್ ಆಸ್ಪತ್ರೆ ಮತ್ತು ಏಮ್ಸ್‌ಗೆ ಕರೆದೊಯ್ದರು. ಆದರೆ ಚಿಕಿತ್ಸೆಯ ಸಮಯದಲ್ಲಿ ಎಲ್ಲರೂ ಮೃತಪಟ್ಟಿದ್ದಾರೆ.
ಮೃತರನ್ನು ಶಬಿಬುಲ್ (30), ರಬಿಬುಲ್ (30), ಮುತ್ತು ಅಲಿ (45), ರುಬಿನಾ (25), ಡಾಲಿ (25), ಹಶಿಬುಲ್ ಹಾಗೂ ಮಕ್ಕಳಾದ ರುಖ್ಸಾನಾ(6) ಮತ್ತು ಹಸೀನಾ (7) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂದೆ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಲು ಅಧಿಕಾರಿಗಳು ಶೆಲ್ಟರ್ ಗಳಿಂದ ಜನರನ್ನು ಸ್ಥಳಾಂತರಿಸಿದ್ದಾರೆ. "ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ದೇವಾಲಯದ ಬಳಿಯ ಹಳೆಯ ಗೋಡೆ ಕುಸಿದಿದೆ. ಅದರ ಪಕ್ಕದಲ್ಲಿಯೇ ಸ್ಕ್ರ್ಯಾಪ್ ವ್ಯಾಪಾರಿಗಳು ತಮ್ಮ ಶೆಲ್ಟರ್ ಗಳನ್ನು ಹೊಂದಿದ್ದರು. ಇಂತಹ ಘಟನೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ನಾವು ಅವರನ್ನು ಸ್ಥಳಾಂತರಿಸಿದ್ದೇವೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ಐಶ್ವರ್ಯ ಶರ್ಮಾ ಅವರು ಹೇಳಿದ್ದಾರೆ.
ರಾಜಧಾನಿಯಲ್ಲಿ ಭಾರಿ ಮಳೆ
ದೆಹಲಿಯಲ್ಲಿ ಶುಕ್ರವಾರ ರಾತ್ರಿಯಿಂದ ನಿರಂತರ ಮಳೆಯಾಗುತ್ತಿರುವುದರಿಂದ ಈ ದುರಂತ ಸಂಭವಿಸಿದೆ. ಅಲ್ಲದೆ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಶನಿವಾರ ರೆಡ್ ಅಲರ್ಟ್ ಘೋಷಿಸಿದೆ.
ಭಾರೀ ಮಳೆಯಿಂದ ದೆಹಲಿಯ ಹಲವು ನಗರಗಳಲ್ಲಿ ವ್ಯಾಪಕ ನೀರು ನಿಲ್ಲುವಿಕೆ, ಅಂಡರ್‌ಪಾಸ್‌ಗಳು ಜಲಾವೃತಗೊಂಡಿದ್ದು, ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ, ದೆಹಲಿಯ ಪ್ರಮುಖ ಹವಾಮಾನ ಕೇಂದ್ರವಾದ ಸಫ್ದರ್ಜಂಗ್ ನಲ್ಲಿ 78.7 ಮಿಮೀ ಮಳೆ ದಾಖಲಾಗಿದ್ದರೆ, ಪ್ರಗತಿ ಮೈದಾನದಲ್ಲಿ 100 ಮಿಮೀ ಮಳೆಯಾಗಿದೆ.
Advertisement