
ನವದೆಹಲಿ: ಅನಾರೋಗ್ಯದ ಕಾರಣ ನೀಡಿ ಉಪ ರಾಷ್ಟ್ರಪತಿ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದ ಜಗದೀಪ್ ಧನಕರ್ ಅವರು ಈಗ ಎಲ್ಲಿದ್ದಾರೆ? ಅವರು ಸುರಕ್ಷಿತವಾಗಿದ್ದಾರೆ ಎಂದು ಮಾಜಿ ಕಾನೂನು ಸಚಿವ ಮತ್ತು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು ಶನಿವಾರ ಪ್ರಶ್ನಿಸಿದ್ದಾರೆ.
ಜಗದೀಪ್ ಧನಕರ್ ಅವರು ಜುಲೈ 21ರಂದು ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅವರು ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ ಮತ್ತು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಈ ಬಗ್ಗೆ ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದೆ.
'ಲಾಪತಾ ಲೇಡೀಸ್' ಚಿತ್ರದ ಬಗ್ಗೆ ಕೇಳಿದ್ದೇನೆ. ಆದರೆ "ಲಾಪತಾ(ನಾಪತ್ತೆ) ಉಪ ರಾಷ್ಟ್ರಪತಿ ಬಗ್ಗೆ" ಎಂದಿಗೂ ಕೇಳಿಲ್ಲ ಎಂದಿರುವ ಕಪಿಲ್ ಸಿಬಲ್ ಅವರು, ಮಾಜಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಎಲ್ಲಿದ್ದಾರೆ ಎಂಬ ಪ್ರಶ್ನೆ ಕೇಂದ್ರ ಸರ್ಕಾರ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಧನಕರ್ ಅವರ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಇರುವ ಕಳವಳಗಳನ್ನು ನಿವಾರಿಸಲು ಅವರ ಎಲ್ಲಿದ್ದಾರೆ ಎಂಬುದರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆ ನೀಡಬೇಕೆಂದು ಸಿಬಲ್ ಆಗ್ರಹಿಸಿದ್ದಾರೆ.
"ಜುಲೈ 21 ರಂದು, ನಮ್ಮ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ನೀಡಿದರು ಮತ್ತು ಅಂದಿನಿಂದ ಇಲ್ಲಿಯವರೆಗೆ ಅವರು ಎಲ್ಲಿದ್ದಾರೆಂದು ನಮಗೆ ಗೊತ್ತಿಲ್ಲ. ಅವರು ತಮ್ಮ ಅಧಿಕೃತ ನಿವಾಸದಲ್ಲಿಲ್ಲ. ಮೊದಲ ದಿನ, ನಾನು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ ಮತ್ತು ಅವರ ಆಪ್ತ ಕಾರ್ಯದರ್ಶಿ ಫೋನ್ ತೆಗೆದುಕೊಂಡು ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಹೇಳಿದರು" ಎಂದು ಸಿಬಲ್ ತಿಳಿಸಿದ್ದಾರೆ.
ತಮ್ಮ ಹಲವಾರು ರಾಜಕೀಯ ಸಹೋದ್ಯೋಗಿಗಳು ಸಹ ಅವರನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.
ಜಗದೀಪ್ ಧನಕರ್ ಅವರು ದಿಢೀರನೆ ರಾಜೀನಾಮೆ ನೀಡುವುದರ ಹಿಂದೆ ಎನ್ಡಿಎ ಸರ್ಕಾರದ ಕೈವಾಡವಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದಕ್ಕೆ ಬಿಜೆಪಿಯಾಗಲಿ ಅಥವಾ ಜಗದೀಪ್ ಧನಕರ್ ಆಗಲಿ ಪ್ರತಿಕ್ರಿಯೆ ನೀಡಿರಲಿಲ್ಲ. ಅದರ ಬೆನ್ನಲ್ಲೇ ರಾಜೀನಾಮೆಯ ಬಳಿಕ ಜಗದೀಪ್ ಧನಕರ್ ಅಜ್ಞಾತರಾಗಿ ಉಳಿದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕಪಿಲ್ ಸಿಬಲ್ ಕೇಂದ್ರ ಸರ್ಕಾರಕ್ಕೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಜಗದೀಪ್ ಧನ್ಖರ್ ಎಲ್ಲಿದ್ದಾರೆ? ಅವರು ಸುರಕ್ಷಿತರಾಗಿದ್ದಾರಾ? ಅವರು ಯಾಕೆ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ? ಎಂಬುದರ ಬಗ್ಗೆ ಮಾಹಿತಿ ಬೇಕಾಗಿದೆ. ಅವರು ದೇಶದ ಉಪರಾಷ್ಟ್ರಪತಿಗಳಾಗಿದ್ದವರು. ಅವರ ಬಗ್ಗೆ ತಿಳಿಯುವ ಹಕ್ಕು ಜನರಿಗೆ ಇದೆ. ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ಮಾಹಿತಿ ನೀಡಬೇಕು ಎಂದು ಕಪಿಲ್ ಸಿಬಲ್ ಒತ್ತಾಯಿಸಿದ್ದಾರೆ.
Advertisement