
ಕೊಚ್ಚಿ: ಗುರುವಾರ ಕೇರಳದ ಕೊಚ್ಚಿಯಲ್ಲಿ ಭಯಾನಕ ಘಟನೆಯೊಂದು ನಡೆದಿತ್ತು. ಯುವನೋರ್ವ ಮೆಟ್ರೋ ನಿಲ್ದಾಣದಿಂದ ಹಳಿ ಹಿಡಿದು ಓಡಿ ಹೋಗಿ ಎತ್ತರಿಸಿದ ಮಾರ್ಗದ ಸೇತುವೆ( ವಯಾಡಕ್ಟ್ ) ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ದುರಂತ ಘಟನೆಯ ನಂತರ ಕೊಚ್ಚಿ ಮೆಟ್ರೋ ರೈಲು ಲಿಮಿಟೆಡ್ (ಕೆಎಂಆರ್‌ಎಲ್) ನಿರ್ದೇಶಕರ ಮಟ್ಟದ ತನಿಖೆಯನ್ನು ಪ್ರಾರಂಭಿಸಿದೆ.
ಮೃತರನ್ನು ಮಲಪ್ಪುರಂ ಜಿಲ್ಲೆಯ ಚುಲ್ಲಿಪ್ಪಾರ ನಿವಾಸಿ ನಿಸಾರ್ ಎಂದು ಗುರುತಿಸಲಾಗಿದೆ. ಕೊಚ್ಚಿ ಮೆಟ್ರೋದ ವಡಕ್ಕೆಕೊಟ್ಟಾ ನಿಲ್ದಾಣ ಹಾಗೂ ತ್ರಿಪ್ಪುನಿತುರ ನಿಲ್ದಾಣಗಳ ಮಧ್ಯೆ ಈ ಘಟನೆ ನಡೆದಿತ್ತು. ವಡಕ್ಕೆಕೊಟ್ಟಾದಿಂದ ತ್ರಿಪ್ಪುರನಿತುರಕ್ಕೆ ಮೆಟ್ರೋ ಟಿಕೆಟ್ ಖರೀದಿಸಿ ಪ್ರಯಾಣ ಮಾಡಲು ಬಂದಿದ್ದ ನಿಸಾರ್, ರೈಲು ಬರುವ ಮೊದಲೇ ಹಳಿ ಮೇಲೆ ಇಳಿದು ಓಡಿ ಹೋಗಿದ್ದರು.
ಯುವಕ ಹಳಿ ಮೇಲೆ ಓಡುವಾಗ ಮೆಟ್ರೋ ಸಿಬ್ಬಂದಿ ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ರೆಡ್ ಅಲರ್ಟ್ ಘೋಷಿಸಿದ್ದರು.
ನಿಸಾರ್ ಆತ್ಮಹತ್ಯೆ ಮಾಡಿಕೊಳ್ಳಲು ಸೇತುವೆ ಮೇಲೆ ನಿಂತಿದ್ದ ಜಾಗದ ಕೆಳಗೆ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಲು ಯತ್ನಿಸಿದ್ದರು. ಕೆಲವರು ಕೆಳಗೆ ಬಲೆ ಹಿಡಿದು ನಿಂತಿದ್ದರು. ಆದರೆ ಬಲೆ ಹಿಡಿದಿದ್ದ ಜಾಗದಿಂದ ಬೇರೆ ಕಡೆಗೆ ಜಿಗಿದಿದ್ದ ನಿಸಾರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಆತ ಬದುಕುಳಿಯಲಿಲ್ಲ.
ಹಣಕಾಸಿನ ಒತ್ತಡದಿಂದ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಕೊಚ್ಚಿ ಮೆಟ್ರೋ ಪೊಲೀಸರು ಅವರ ಸಂಬಂಧಿಕರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಈ ಹಂತದಲ್ಲಿ ಏನನ್ನೂ ಹೇಳಲು ಸಾಧ್ಯವಿಲ್ಲ. ಸದ್ಯಕ್ಕೆ ಹಣಕಾಸಿನ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣ ಎಂಬುದು ತಿಳಿದುಬಂದಿದೆ. ಆ ನಿಟ್ಟಿನಲ್ಲಿ ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement