ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರಿಗೆ ಕ್ರಿಮಿನಲ್ ವಿಚಾರಣೆ ನಡೆಸಲು ನಿಷೇಧ; ಟೀಕೆ ಬೆನ್ನಲ್ಲೇ ಆದೇಶ ಹಿಂಪಡೆದ ಸುಪ್ರೀಂ ಕೋರ್ಟ್

ಆಗಸ್ಟ್ 4 ರಂದು ತನ್ನ ಆದೇಶದಲ್ಲಿ, ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರ ಪೀಠವು ನ್ಯಾಯಮೂರ್ತಿ ಪ್ರಶಾಂತ್‌ ಕುಮಾರ್ ಅವರು ಸಿವಿಲ್ ವಿವಾದವನ್ನು ಕ್ರಿಮಿನಲ್ ಪ್ರಕರಣವೆಂದು ಪರಿಗಣಿಸಿದ್ದಕ್ಕಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.
Supreme court
ಸುಪ್ರೀಂ ಕೋರ್ಟ್ online desk
Updated on

ನವದೆಹಲಿ: ಸಿವಿಲ್‌ ವ್ಯಾಜ್ಯ ಪ್ರಕರಣದಲ್ಲಿ ಕ್ರಿಮಿನಲ್‌ ಕಾರ್ಯಕಲಾಪಗಳಿಗೆ ಅವಕಾಶ ನೀಡಿದ್ದಾರೆ ಎಂಬ ಕಾರ­ಣಕ್ಕೆ ಅಲಹಾಬಾದ್‌ ಹೈಕೋರ್ಟ್‌ ನ್ಯಾ. ಪ್ರಶಾಂತ್‌ ಕುಮಾರ್‌ರನ್ನು ಟೀಕಿಸಿದ್ದ ತನ್ನ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಹಿಂಪಡೆದಿದೆ.

ಆಗಸ್ಟ್ 4 ರಂದು ತನ್ನ ಆದೇಶದಲ್ಲಿ, ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರ ಪೀಠವು ನ್ಯಾಯಮೂರ್ತಿ ಪ್ರಶಾಂತ್‌ ಕುಮಾರ್ ಅವರು ಸಿವಿಲ್ ವಿವಾದವನ್ನು ಕ್ರಿಮಿನಲ್ ಪ್ರಕರಣವೆಂದು ಪರಿಗಣಿಸಿದ್ದಕ್ಕಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ಸಿವಿಲ್ ವಿವಾದಗಳಲ್ಲಿ ಹಣವನ್ನು ವಸೂಲಿ ಮಾಡಲು ಪರ್ಯಾಯ ಮಾರ್ಗವಾಗಿ ಕ್ರಿಮಿನಲ್ ಮೊಕದ್ದಮೆಯನ್ನು ಬಳಸಬಹುದು ಎಂದು ತೀರ್ಪು ನೀಡಿದ್ದಕ್ಕಾಗಿ ಆಗಸ್ಟ್ 4 ರಂದು ನ್ಯಾಯಾಲಯವು ನ್ಯಾಯಮೂರ್ತಿ ಕುಮಾರ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.

ನ್ಯಾಯಾಧೀಶರು ನಿವೃತ್ತರಾಗುವವರೆಗೂ ಕ್ರಿಮಿನಲ್ ಪ್ರಕರಣಗಳನ್ನು ವಿಚಾರಣೆ ನಡೆಸದಂತೆ ಪೀಠವು ನಿರ್ಬಂಧ ಹೇರಿತ್ತು. ಹೈಕೋರ್ಟ್‌ನ ಅನುಭವಿ ಹಿರಿಯ ನ್ಯಾಯಾಧೀಶರೊಂದಿಗೆ ವಿಭಾಗೀಯ ಪೀಠದಲ್ಲಿ ಕುಳಿತುಕೊಳ್ಳುವಂತೆ ಮಾಡಿ ಎಂದು ಸುಪ್ರೀಂ ಕೋರ್ಟ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಆಗ್ರಹಿಸಿತ್ತು.

ಸಂಬಂಧಪಟ್ಟ ನ್ಯಾಯಾಧೀಶರು ತಮ್ಮ ಹುದ್ದೆಯಿಂದ ಕೆಳಗಿಳಿಯುವವರೆಗೆ ಅವರಿಗೆ ಯಾವುದೇ ಕ್ರಿಮಿನಲ್ ನಿರ್ಣಯವನ್ನು ನಿಯೋಜಿಸಬಾರದು. ಯಾವುದೇ ಸಮಯದಲ್ಲಿ, ಅವರನ್ನು ಏಕ ನ್ಯಾಯಾಧೀಶರನ್ನಾಗಿ ನೇಮಿಸಬೇಕಾದರೆ, ಅವರಿಗೆ ಯಾವುದೇ ಕ್ರಿಮಿನಲ್ ನಿರ್ಣಯವನ್ನು ನಿಯೋಜಿಸಬಾರದು ಎಂದು ಆದೇಶಿಸಿತ್ತು.

Supreme court
ಮತಾಂತರವಾಗದೇ ನಡೆದ ಅಂತರಧರ್ಮಿಯ ವಿವಾಹಗಳು ಕಾನೂನುಬಾಹಿರ: ಅಲಹಾಬಾದ್ ಹೈಕೋರ್ಟ್‌ ಮಹತ್ವದ ತೀರ್ಪು

ಈ ಆದೇಶ ಕುರಿತು ಹಲವು ಟೀಕೆಗಳು ವ್ಯಕ್ತವಾಗಿದ್ದವು. ಅಲಾಹಾಬಾದ್ ಹೈಕೋರ್ಟ್‌ನ ಕನಿಷ್ಠ 13 ನ್ಯಾಯಾಧೀಶರು ಅದರ ಮುಖ್ಯ ನ್ಯಾಯಮೂರ್ತಿ ಅರುಣ್ ಬನ್ಸಾಲಿ ಅವರಿಗೆ ಪತ್ರ ಬರೆದು ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ಧಿಕ್ಕರಿಸುವಂತೆ ಒತ್ತಾಯಿಸಿದ್ದರು. ಈ ವಿಷಯದ ಬಗ್ಗೆ ಚರ್ಚಿಸಲು ಪೂರ್ಣ ನ್ಯಾಯಾಲಯದ ಸಭೆಯನ್ನು ಕೋರಿದ್ದರು.

ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ಹಿಂಪಡೆದುಕೊಂಡಿದೆ. ಸಿಜೆಐ ಅವರ ವಿನಂತಿಯ ಹಿನ್ನೆಲೆಯಲ್ಲಿ ಆಗಸ್ಟ್4 ರ ಆದೇಶವನ್ನು ಹಿಂಪಡೆಯುತ್ತಿದ್ದೇವೆ. ಈ ವಿಷಯವನ್ನು ಪರಿಶೀಲಿಸಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ನಾವು ಬಿಡುತ್ತೇವೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ʼರೋಸ್ಟರ್‌ನ ಮಾಸ್ಟರ್ʼ (ರೋಸ್ಟರ್‌ ನಿರ್ಧರಿಸುವವರು) ಎಂದು ನಾವು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇವೆ. ನಾವು ನೀಡಿದ್ದ ನಿರ್ದೇಶನಗಳು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯ ಆಡಳಿತಾತ್ಮಕ ಅಧಿಕಾರದಲ್ಲಿ ನಿಶ್ಚಿತವಾಗಿಯೂ ಹಸ್ತಕ್ಷೇಪ ಮಾಡುವಂತಿರಲಿಲ್ಲ. ಯಾವಾಗ ವಿಷಯಗಳು ಕಾನೂನಾತ್ಮಕ ಆಡಳಿತದ ಮೇಲೆ ಪರಿಣಾಮ ಬೀರುತ್ತದೆಯೇ ಆಗ ನ್ಯಾಯಾಲಯವು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಹೇಳಿದೆ.

ಸಂಬಂಧಪಟ್ಟ ನ್ಯಾಯಾಧೀಶರ ಮೇಲೆ ಮುಜುಗರ ಉಂಟುಮಾಡುವುದು ಅಥವಾ ಅವರ ಮೇಲೆ ಅಪವಾದ ಹೊರಿಸುವುದು ನಮ್ಮ ಉದ್ದೇಶವಲ್ಲ. ನಮ್ಮ ಆದೇಶದಲ್ಲಿ ನಾವು ಏನು ಹೇಳಿದ್ದೇವೋ ಅದು ನ್ಯಾಯಾಂಗದ ಘನತೆಯನ್ನು ಉನ್ನತ ಮಟ್ಟದಲ್ಲಿರಿಸಲು ಖಾತ್ರಿಪಡಿಸಿಕೊಳ್ಳುವ ಉದ್ದೇಶವಾಗಿದೆ ಎಂದು ವಿವರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com