Lok Sabha: ಯಾವುದೇ ಚರ್ಚೆಯಿಲ್ಲದೆ ಗದ್ದಲದ ನಡುವೆಯೇ 2 ತೆರಿಗೆ ಮಸೂದೆಗಳ ಅಂಗೀಕಾರ!

ಆದಾಯ ತೆರಿಗೆ (ಸಂಖ್ಯೆ 2) ಮಸೂದೆ ಮತ್ತು ತೆರಿಗೆ ಕಾನೂನುಗಳು (ತಿದ್ದುಪಡಿ) ಮಸೂದೆಗಳನ್ನು ಇಂದು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.
Lok Sabha passes two tax bills amid din without debate
Updated on

ನವದೆಹಲಿ: ವಿರೋಧ ಪಕ್ಷದ ನಿರಂತರ ಪ್ರತಿಭಟನೆಯ ನಡುವೆಯೇ, ಲೋಕಸಭೆಯು ಸೋಮವಾರ ತೆರಿಗೆಗೆ ಸಂಬಂಧಿಸಿದ ಎರಡು ಪ್ರಮುಖ ಶಾಸನಗಳನ್ನು ಅಂಗೀಕರಿಸಿದೆ.

ಆದಾಯ ತೆರಿಗೆ (ಸಂಖ್ಯೆ 2) ಮಸೂದೆ ಮತ್ತು ತೆರಿಗೆ ಕಾನೂನುಗಳು (ತಿದ್ದುಪಡಿ) ಮಸೂದೆಗಳನ್ನು ಇಂದು ಲೋಕಸಭೆಯಲ್ಲಿ ಅಂಗೀಕರಿಸಲಾಗಿದ್ದು, ಈ ಮಸೂದೆಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಿನದ ಮೊದಲು ಕೆಳಮನೆಯಲ್ಲಿ ಪರಿಚಯಿಸಿದ್ದರು.

ಆದಾಯ ತೆರಿಗೆ (ಸಂಖ್ಯೆ 2) ಮಸೂದೆ, 2025, ಆದಾಯ ತೆರಿಗೆ ಕಾಯ್ದೆ 1961 ಕ್ಕೆ ಸಂಬಂಧಿಸಿದ ಕಾನೂನನ್ನು ಕ್ರೋಢೀಕರಿಸಲು ಮತ್ತು ತಿದ್ದುಪಡಿ ಮಾಡಲು ಪ್ರಯತ್ನಿಸುತ್ತದೆ. ಈ ಮಸೂದೆಯು ಆದಾಯ ತೆರಿಗೆ ಕಾಯ್ದೆ, 1961 ಅನ್ನು ಬದಲಾಯಿಸುತ್ತದೆ. ಈ ಮಸೂದೆಯು ಹಿರಿಯ ಬಿಜೆಪಿ ಸದಸ್ಯ ಬೈಜಯಂತ್ ಪಾಂಡಾ ನೇತೃತ್ವದ ಆಯ್ಕೆ ಸಮಿತಿಯ ಬಹುತೇಕ ಎಲ್ಲಾ ಶಿಫಾರಸುಗಳನ್ನು ಒಳಗೊಂಡಿದೆ.

ಇತರ ಶಾಸನ - ತೆರಿಗೆ ಕಾನೂನುಗಳು (ತಿದ್ದುಪಡಿ) ಮಸೂದೆ, 2025, ಆದಾಯ ತೆರಿಗೆ ಕಾಯ್ದೆ, 1961 ಮತ್ತು ಹಣಕಾಸು ಕಾಯ್ದೆ, 2025 ಅನ್ನು ತಿದ್ದುಪಡಿ ಮಾಡುತ್ತದೆ. ಇದು ಏಕೀಕೃತ ಪಿಂಚಣಿ ಯೋಜನೆಯ ಚಂದಾದಾರರಿಗೆ ತೆರಿಗೆ ವಿನಾಯಿತಿಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗಿದೆ.

Lok Sabha passes two tax bills amid din without debate
ಪ್ರತಿಪಕ್ಷಗಳ ಪ್ರತಿಭಟನೆ ನಡುವೆ ಲೋಕಸಭೆಯಲ್ಲಿ ಐತಿಹಾಸಿಕ ಕ್ರೀಡಾ ಆಡಳಿತ, ಡೋಪಿಂಗ್ ತಡೆ ಮಸೂದೆ ಅಂಗೀಕಾರ

"ಆಯ್ಕೆ ಸಮಿತಿಯ ಬಹುತೇಕ ಎಲ್ಲಾ ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸಿದೆ. ಇದರ ಜೊತೆಗೆ, ಪ್ರಸ್ತಾವಿತ ಕಾನೂನು ಅರ್ಥವನ್ನು ಹೆಚ್ಚು ನಿಖರವಾಗಿ ತಿಳಿಸುವ ಬದಲಾವಣೆಗಳ ಕುರಿತು ಪಾಲುದಾರರಿಂದ ಸಲಹೆಗಳನ್ನು ಸ್ವೀಕರಿಸಲಾಗಿದೆ" ಎಂದು ಆದಾಯ ತೆರಿಗೆ (ಸಂ.2) ಮಸೂದೆ, 2025 ರ ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಫೆಬ್ರವರಿ 13 ರಂದು ಲೋಕಸಭೆಯಲ್ಲಿ ಪರಿಚಯಿಸಲಾದ ಆದಾಯ ತೆರಿಗೆ ಮಸೂದೆ, 2025 ರಲ್ಲಿ ಆಯ್ಕೆ ಸಮಿತಿಯು ಹಲವಾರು ಬದಲಾವಣೆಗಳನ್ನು ಸೂಚಿಸಿತ್ತು.

"ಕರಡು ರಚನೆ, ಪದಗುಚ್ಛಗಳ ಜೋಡಣೆ, ಪರಿಣಾಮದ ಬದಲಾವಣೆಗಳು ಮತ್ತು ಅಡ್ಡ-ಉಲ್ಲೇಖಗಳ ಸ್ವರೂಪದಲ್ಲಿ ತಿದ್ದುಪಡಿಗಳಿವೆ. ಆದ್ದರಿಂದ, ಆಯ್ಕೆ ಸಮಿತಿ ವರದಿ ಮಾಡಿದಂತೆ ಆದಾಯ ತೆರಿಗೆ ಮಸೂದೆ, 2025 ಅನ್ನು ಹಿಂಪಡೆಯಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಪರಿಣಾಮವಾಗಿ, ಆದಾಯ ತೆರಿಗೆ (ಸಂ.2) ಮಸೂದೆ, 2025 ಅನ್ನು ಆದಾಯ ತೆರಿಗೆ ಕಾಯ್ದೆ, 1961 ರ ಬದಲಿಗೆ ಸಿದ್ಧಪಡಿಸಲಾಗಿದೆ" ಎಂದು ಹೇಳಿಕೆ ತಿಳಿಸಿದೆ.

ಲೋಕಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲ್ಪಟ್ಟ ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ, 2025, ಆದಾಯ ತೆರಿಗೆ ಶೋಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಬ್ಲಾಕ್ ಮೌಲ್ಯಮಾಪನ ಯೋಜನೆಯಲ್ಲಿ ಬದಲಾವಣೆಗಳನ್ನು ಒಳಗೊಂಡಿತ್ತು ಮತ್ತು ಸೌದಿ ಅರೇಬಿಯಾದ ಸಾರ್ವಜನಿಕ ಹೂಡಿಕೆ ನಿಧಿಗಳಿಗೆ ಕೆಲವು ನೇರ ತೆರಿಗೆ ಪ್ರಯೋಜನಗಳನ್ನು ಒದಗಿಸುತ್ತದೆ. ಇದು ಆದಾಯ ತೆರಿಗೆ ಕಾಯ್ದೆ, 1961 ಮತ್ತು ಹಣಕಾಸು ಕಾಯ್ದೆ, 2025 ಅನ್ನು ತಿದ್ದುಪಡಿ ಮಾಡಲು ಪ್ರಯತ್ನಿಸುತ್ತದೆ.

ಅಂತೆಯೇ ಹೊಸ ಪಿಂಚಣಿ ಯೋಜನೆ (NPS) ಅಡಿಯಲ್ಲಿ ಲಭ್ಯವಿರುವ ಎಲ್ಲಾ ತೆರಿಗೆ ಪ್ರಯೋಜನಗಳು ಏಪ್ರಿಲ್ 1, 2025 ರಿಂದ ಜಾರಿಗೆ ಬಂದ ಏಕೀಕೃತ ಪಿಂಚಣಿ ಯೋಜನೆ (UPS) ಗೆ ಅನ್ವಯಿಸುತ್ತವೆ ಎಂದು ಸರ್ಕಾರ ಜುಲೈನಲ್ಲಿ ಘೋಷಿಸಿತ್ತು. ಬಿಹಾರದಲ್ಲಿ ಮತದಾರರ ಪಟ್ಟಿಗಳ ಪರಿಷ್ಕರಣೆಯ ಕುರಿತು ವಿರೋಧ ಪಕ್ಷದ ಸದಸ್ಯರ ತೀವ್ರ ಪ್ರತಿಭಟನೆಯ ನಡುವೆ ಈ ಮಸೂದೆಗಳನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲಾಯಿತು.

ಕಲಾಪ ಮುಂದೂಡಿಕೆ

ಧ್ವನಿ ಮತದ ಮೂಲಕ ಈ ಮಸೂದೆಗಳನ್ನು ಅಂಗೀಕರಿಸಿದ ನಂತರ, ಲೋಕಸಭೆಯನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com