
ನವದೆಹಲಿ: ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ವಾಹನಗಳ ಮೇಲೆ ಬೀರುವ ಪರಿಣಾಮದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿರುವ ನಡುವೆಯೇ ಈ ಕುರಿತು ಕೇಂದ್ರ ಸರ್ಕಾರ ಮಹತ್ವದ ಸ್ಪಷ್ಟನೆ ನೀಡಿದೆ.
ಎಥೆನಾಲ್ ಮಿಶ್ರಿತ E20 ಇಂಧನ ಕುರಿತಾಗಿ ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿರುವ ಕೇಂದ್ರ ಸರ್ಕಾರ, ಇಂಧನ ದಕ್ಷತೆಯಲ್ಲಿ ತೀವ್ರ ಕುಸಿತದ ಬಗ್ಗೆ ಕಳವಳಗಳು ತಪ್ಪಾಗಿವೆ ಎಂದು ಹೇಳಿದೆ. ಈ ಕುರಿತು ಮಂಗಳವಾರ ತೈಲ ಸಚಿವಾಲಯ ಮಾಹಿತಿ ನೀಡಿದ್ದು, ವಾಸ್ತವವಾಗಿ E20 ಇಂಧನವು ಸುಧಾರಿತ ವೇಗವರ್ಧನೆಯನ್ನು ನೀಡುತ್ತದೆ ಎಂದು ಹೇಳಿದೆ.
ಕಬ್ಬು ಅಥವಾ ಮೆಕ್ಕೆಜೋಳದಿಂದ ಹೊರತೆಗೆಯಲಾದ ಶೇಕಡಾ 20 ರಷ್ಟು ಎಥೆನಾಲ್‌ನೊಂದಿಗೆ ಪೆಟ್ರೋಲ್ ಅನ್ನು ಡೋಪಿಂಗ್ ಮಾಡುವುದು ಹೊರಸೂಸುವಿಕೆಯನ್ನು ಕಡಿತಗೊಳಿಸುವ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ರಾಷ್ಟ್ರೀಯ ಕಾರ್ಯಕ್ರಮವಾಗಿದೆ.
ಇದನ್ನು ಕೆಲವರು ಭಯ ಮತ್ತು ಗೊಂದಲವನ್ನು ಹುಟ್ಟುಹಾಕುವ ಮೂಲಕ ಯೋಜನೆಯ "ಹಳಿತಪ್ಪಿಸಲು" ಪ್ರಯತ್ನಿಸುತ್ತಿದ್ದಾರೆ. ಹಳೆಯ ವಾಹನಗಳಲ್ಲಿ ಅಗತ್ಯವಿರುವ ಯಾವುದೇ ಸಣ್ಣ ಭಾಗಗಳ ಬದಲಾವಣೆಯನ್ನು ಕಂಪನಿಯ ಅಧಿಕೃತ ವರ್ಕ್‌ಶಾಪ್‌ನಲ್ಲಿ ಮಾಡಿಕೊಳ್ಳಬಹುದು ಎಂದು ಅದು ಹೇಳಿದೆ.
ಹೇಳಿಕೆಯಲ್ಲಿ, ಸಚಿವಾಲಯವು E20 (ಶೇಕಡಾ 20 ಎಥೆನಾಲ್, ಶೇಕಡಾ 80 ಪೆಟ್ರೋಲ್) ಬಳಸುವ ಪ್ರಯೋಜನಗಳನ್ನು ಪಟ್ಟಿ ಮಾಡಿದ್ದು, ಅಂತಹ ಇಂಧನವನ್ನು ಬಳಸುವುದು. ಭಾರತದಲ್ಲಿ ವಾಹನಗಳ ವಿಮೆಯ ಸಿಂಧುತ್ವದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ.
ಅಂತೆಯೇ ಚಾಲನಾ ಅಭ್ಯಾಸಗಳು, ವಾಹನ ನಿರ್ವಹಣೆ, ಟೈರ್ ಒತ್ತಡ ಮತ್ತು ಹವಾನಿಯಂತ್ರಣ ಬಳಕೆಯಂತಹ ಅಂಶಗಳು ವಾಹನದ ಮೈಲೇಜ್ ಮೇಲೆ ಪ್ರಭಾವ ಬೀರುತ್ತವೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ವಿಮೆ ಮೇಲೆ ಪರಿಣಾಮ ಇಲ್ಲ
"ಕೆಲವರು ಕಾರು ಮಾಲೀಕರ ಮನಸ್ಸಿನಲ್ಲಿ ಭಯ ಮತ್ತು ಗೊಂದಲ ಹುಟ್ಟುಹಾಕಲು ಪ್ರಯತ್ನಿಸುತ್ತಾರೆ. ಆಯ್ದ ಮಾಹಿತಿಯನ್ನು ಆರಿಸಿಕೊಂಡು ಮತ್ತು ವಿಮಾ ಕಂಪನಿಗಳು E20 ಇಂಧನಗಳ ಬಳಕೆಯಿಂದ ಉಂಟಾಗುವ ಕಾರು ಹಾನಿಯನ್ನು ಭರಿಸುವುದಿಲ್ಲ ಎಂಬ ಸುಳ್ಳು ನಿರೂಪಣೆಯನ್ನು ಸೃಷ್ಟಿಸುತ್ತಾರೆ.
ಈ ಭಯ ಹುಟ್ಟಿಸುವ ಮಾತು ಸಂಪೂರ್ಣವಾಗಿ ಆಧಾರರಹಿತವಾಗಿದ್ದು, ವಿಮಾ ಕಂಪನಿಯೊಂದು ತನ್ನ ಟ್ವೀಟ್ ಸ್ಕ್ರೀನ್‌ಶಾಟ್ ಅನ್ನು ಉದ್ದೇಶಪೂರ್ವಕವಾಗಿ ಭಯ ಮತ್ತು ಗೊಂದಲವನ್ನು ಸೃಷ್ಟಿಸಲು ತಪ್ಪಾಗಿ ಅರ್ಥೈಸಿಕೊಂಡಿದೆ. E20 ಇಂಧನದ ಬಳಕೆಯು ಭಾರತದಲ್ಲಿ ವಾಹನಗಳ ವಿಮೆಯ ಸಿಂಧುತ್ವದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಕಳೆದ ಕೆಲವು ದಿನಗಳಿಂದ, ಸಾಮಾಜಿಕ ಮಾಧ್ಯಮದಲ್ಲಿ ವಾಹನಗಳ ಮೇಲೆ E20 ಇಂಧನ ಬಳಸುವುದರಿಂದ ಇಂಧನ ದಕ್ಷತೆಯಲ್ಲಿ ಕನಿಷ್ಠ 7 ಪ್ರತಿಶತದಷ್ಟು ಇಳಿಕೆಯಾಗುತ್ತದೆ ಎಂದು ಹೇಳುವ ಕೆಲವು ಪೋಸ್ಟ್‌ಗಳ ಬಗ್ಗೆ ಚರ್ಚೆ ಹೆಚ್ಚುತ್ತಿದೆ. E20 ಇಂಧನ ದಕ್ಷತೆಯಲ್ಲಿ 'ತೀವ್ರ' ಕಡಿತವನ್ನು ಉಂಟುಮಾಡುತ್ತದೆ ಎಂದು ಸೂಚಿಸುವ ಟೀಕೆಗಳು ತಪ್ಪಾಗಿವೆ ಎಂದು ಸಚಿವಾಲಯ ಹೇಳಿದೆ.
ಏನಿದು E20 ಇಂಧನ?
2003ಕ್ಕೆ ಮೊದಲು ಭಾರತದಲ್ಲಿ (India) ಕಚ್ಚಾ ತೈಲದಿಂದ ಸಂಸ್ಕರಣೆಗೊಂಡ ಪೆಟ್ರೋಲ್ ಬಂಕ್‌ಗಳಿಗೆ ಬರುತ್ತಿದ್ದವು. ಆದರೆ ಈಗ ಪೆಟ್ರೋಲ್ ಜೊತೆ ಎಥೆನಾಲ್ ಮಿಶ್ರಣವಾಗಿರುವ ಇಂಧನ ಬರುತ್ತಿದೆ. ಶೇ.20ರಷ್ಟು ಎಥೆನಾಲ್ ಮತ್ತು ಶೇ.80ರಷ್ಟು ಪೆಟ್ರೋಲ್ ಮಿಶ್ರಿತ ತೈಲವನ್ನು E20 ತೈಲ ಎನ್ನುತ್ತಾರೆ.
ಎಥೆನಾಲ್ ತಯಾರಿ
ಕಬ್ಬು, ಜೋಳ ಅಥವಾ ಹೆಚ್ಚುವರಿ ಧಾನ್ಯದಿಂದ ತಯಾರಿಸಲಾದ ಜೈವಿಕ ಇಂಧನವನ್ನು ಎಥೆನಾಲ್ ಎಂದು ಕರೆಯಲಾಗುತ್ತದೆ. 2003ರಲ್ಲಿ ಭಾರತದಲ್ಲಿ ಇ5 ಇಂಧನ ಸಿಗತೊಡಗಿತು. 2022ರ ವೇಳೆಗೆ ದೇಶದಲ್ಲಿ ಇ10 ಇಂಧನ ಮಾರಾಟವಾಗುತ್ತಿದೆ. 2023ರಲ್ಲಿ ಕೆಲ ನಗರಗಳಲ್ಲಿ ಪ್ರಾಯೋಗಿಕವಾಗಿ ಇ20 ಇಂಧನ ಮಾರಾಟ ಮಾಡಲಾಗುತ್ತಿದೆ. 2025 ರಿಂದ ದೇಶಾದ್ಯಂತ ಇ20 ಇಂಧನ ಮಾರಾಟ ಮಾಡಲಾಗುತ್ತಿದೆ. 2009 ರಿಂದಲೂ ಅನೇಕ ವಾಹನಗಳು E20 ಇಂಧನಕ್ಕೆ ಹೊಂದಾಣಿಕೆಯಾಗುತ್ತಿವೆ.
ಇಂಡಿಯನ್ ಆಯಿಲ್ ಕಾರ್ಪೋರೇಷನ್, ಆಟೋಮೊಟಿವ್ ರಿಸರ್ಚ್ ಆಸೋಸಿಯೇಷನ್ ಆಫ್ ಇಂಡಿಯಾ, ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರ್ಸ್ ನಡೆಸಿದ ಸಂಶೋಧನೆಯಿಂದ E20 ಇಂಧನವು ಉತ್ತಮ ವೇಗವರ್ಧನೆ ಮತ್ತು E10 ಇಂಧನಕ್ಕಿಂತ 30% ರಷ್ಟು ಕಡಿಮೆ ಇಂಗಾಲದ ಹೊರಸೂಸುವಿಕೆಯನ್ನು ನೀಡುತ್ತದೆ ಎಂದು ಕಂಡುಹಿಡಿದಿದೆ.
E20 ಇಂಧನಕ್ಕೆ ಕೇಂದ್ರ ಒತ್ತಾಯಿಸುತ್ತಿರುವುದೇಕೆ?
ಜೈವಿಕ ಇಂಧನಗಳು ಮತ್ತು ನೈಸರ್ಗಿಕ ಅನಿಲವು ಭಾರತದ ಸೇತುವೆ ಇಂಧನಗಳಾಗಿವೆ. ಕಬ್ಬು ಆಧಾರಿತ ಎಥೆನಾಲ್‌ನಿಂದ ಹಸಿರುಮನೆ ಅನಿಲ ಹೊರಸೂಸುವಿಕೆಯು ಪೆಟ್ರೋಲ್‌ಗಿಂತ 65% ರಷ್ಟು ಕಡಿಮೆ ಮತ್ತು ಮೆಕ್ಕೆಜೋಳ ಆಧಾರಿತ ಎಥೆನಾಲ್‌ನಿಂದ 50% ರಷ್ಟು ಕಡಿಮೆಯಾಗಿದೆ ಎಂದು ನೀತಿ ಆಯೋಗದ ಅಧ್ಯಯನ ಹೇಳಿದೆ.
ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಮಾಡಿದ್ದರಿಂದ ತೈಲ ಮಾರುಕಟ್ಟೆ ಕಂಪನಿಗಳಿಗೆ 1.44 ಲಕ್ಷ ಕೋಟಿಗೂ ರೂ. ಹೆಚ್ಚು ವಿದೇಶಿ ವಿನಿಮಯ ಉಳಿತಾಯವಾಗಿದೆ. ಇಂಗಾಲದ ಡೈಆಕ್ಸೈಡ್ ಅಂದಾಜು 736 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಕಡಿಮೆಯಾಗಿದ್ದು 30 ಕೋಟಿ ಮರಗಳನ್ನು ನೆಡುವುದಕ್ಕೆ ಸಮಾನವಾಗಿದೆ ಎನ್ನಲಾಗಿದೆ.
ದರ ಕೂಡ ಅಗ್ಗಸ ರೈತರಿಗೂ ಲಾಭ
ಪ್ರಸ್ತುತ, ಎಥೆನಾಲ್‌ನ ಸರಾಸರಿ ಖರೀದಿ ವೆಚ್ಚ ಲೀಟರ್‌ಗೆ 71.32 ರೂ.ಗಳಾಗಿದ್ದು, ಸಾರಿಗೆ ಮತ್ತು ಜಿಎಸ್‌ಟಿ ಸೇರಿದಂತೆ, ಮತ್ತು ಮೆಕ್ಕೆಜೋಳ ಆಧಾರಿತ ಎಥೆನಾಲ್‌ನ ಬೆಲೆ 71.86 ರೂ.ಗಳಾಗಿದೆ. ಅಂತೆಯೇ ಶೇ. 20 ರಷ್ಟು ಮಿಶ್ರಣ ಮಾಡುವುದರಿಂದ, ಈ ವರ್ಷ ರೈತರಿಗೆ 40,000 ಕೋಟಿ ಪಾವತಿ ಆಗುವ ನಿರೀಕ್ಷೆಯಿದೆ ಮತ್ತು ವಿದೇಶೀ ವಿನಿಮಯ ಉಳಿತಾಯ ಸುಮಾರು 43,000 ಕೋಟಿ ಆಗಲಿದೆ ಎಂದು ಅದು ಹೇಳಿದೆ.
ಬ್ರೆಜಿಲ್‌ನಲ್ಲಿ ಕೆಲ ವರ್ಷಗಳಿಂದ E27 ಇಂಧನ ಬಳಕೆ ಮಾಡುತ್ತಿದ್ದು ಅಲ್ಲಿ ಯಾವುದೇ ಸಮಸ್ಯೆಯಿಲ್ಲದೇ ಯಶಸ್ವಿಯಾಗಿದೆ. ಟೊಯೋಟಾ, ಹೋಂಡಾ, ಹುಂಡೈ ಮುಂತಾದ ವಾಹನ ತಯಾರಕರು ಅಲ್ಲಿಯೂ ವಾಹನಗಳನ್ನು ಉತ್ಪಾದಿಸುತ್ತಾರೆ ಎಂದು ಸಚಿವಾಲಯ ಸ್ಪಷ್ಟನೆಯಲ್ಲಿ ಹೇಳಿದೆ.
Advertisement