
ನವದೆಹಲಿ: ಸಂಸತ್ತು ಮಂಗಳವಾರ ಹೊಸ ಆದಾಯ ತೆರಿಗೆ ಮಸೂದೆ 2025 ಅನ್ನು ಅಂಗೀಕರಿಸಿದೆ. ಇಂದು ರಾಜ್ಯಸಭೆಯಲ್ಲಿ ವಿಧೇಯಕ ಅಂಗೀಕಾರವಾಗಿದ್ದು, ರಾಷ್ಟ್ರಪತಿಗಳ ಅಂಕಿತ ಪಡೆಯಬೇಕಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆದಾಯ ತೆರಿಗೆ ಮಸೂದೆ, 2025 ಮತ್ತು ತೆರಿಗೆ ಕಾನೂನುಗಳು(ತಿದ್ದುಪಡಿ) ಮಸೂದೆ, 2025 ಈ ಎರಡು ಹಣಕಾಸು ಮಸೂದೆಗಳನ್ನು ಮಂಡಿಸಿದ್ದರು.
ರಾಜ್ಯಸಭೆಯು ಧ್ವನಿ ಮತದೊಂದಿಗೆ ಹೊಸ ಆದಾಯ ತೆರಿಗೆ ಮಸೂದೆಯನ್ನು ಅಂಗೀಕರಿಸಿದೆ.
ಹೊಸ ಆದಾಯ ತೆರಿಗೆ ಮಸೂದೆಯು ಆದಾಯ ತೆರಿಗೆ ಕಾಯ್ದೆ 1961 ಅನ್ನು ಬದಲಾಯಿಸುತ್ತದೆ.
ಆದಾಯ ತೆರಿಗೆ ಕಾನೂನಿನಂತಹ ಪ್ರಮುಖ ಮಸೂದೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸದ ವಿರೋಧ ಪಕ್ಷಗಳ ವಿರುದ್ಧ ಸೀತಾರಾಮನ್ ಅವರು ತೀವ್ರ ವಾಗ್ದಾಳಿ ನಡೆಸಿದರು.
"ವಿರೋಧ ಪಕ್ಷಗಳು ಚರ್ಚೆಯಲ್ಲಿ ಭಾಗವಹಿಸಲು ಬಯಸದಿರುವುದು ಆಘಾತಕಾರಿ" ಎಂದು ಅವರು ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ ಸೋಮವಾರ ಸಂಸದೀಯ ಆಯ್ಕೆ ಸಮಿತಿಯ ಶಿಫಾರಸುಗಳನ್ನು ಆಧರಿಸಿ ಈ ಮಸೂದೆಯನ್ನು ಮಂಡಿಸಿದ್ದರು. ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಹಾಗೂ ಡಿಜಿಟಲೀಕರಣಗೊಳಿಸುವ ಉದ್ದೇಶವನ್ನು ಹೊಂದಿದೆ.
ಬಿಜೆಪಿ ಸಂಸದ ಬೈಜಯಂತ್ ಪಾಂಡಾ ನೇತೃತ್ವದ ಸಂಸತ್ತಿನ ಸ್ಥಾಯಿ ಸಮಿತಿಯು ಈ ಹಿಂದೆ ಮಂಡನೆ ಮಾಡಲಾಗಿದ್ದ ಆದಾಯ ತೆರಿಗೆ ಮಸೂದೆ -2025ಕ್ಕೆ ಹಲವಾರು ಬದಲಾವಣೆಗಳನ್ನು ಶಿಫಾರಸು ಮಾಡಿತ್ತು.
ತೆರಿಗೆ ಪದ್ಧತಿಯನ್ನು ಸರಳಗೊಳಿಸುವುದು ಮತ್ತು ಆದಾಯ ತೆರಿಗೆ ಕಾನೂನನ್ನು ಹೆಚ್ಚು ಸ್ಪಷ್ಟಪಡಿಸುವ ಉದ್ದೇಶದಿಂದ ಸಮಿತಿಯು ಒಟ್ಟು 285 ಶಿಫಾರಸುಗಳನ್ನು ಮಾಡಿತ್ತು. ಈ ಸಮಿತಿಯ ವರದಿಯಲ್ಲಿ ಒಟ್ಟು 566 ಸಲಹೆಗಳು/ಶಿಫಾರಸುಗಳಿದ್ದವು.
Advertisement