
ನವದೆಹಲಿ: ಈ ಸುದ್ದಿಯ ಶೀರ್ಷಿಕೆ ಓದಿ ಇದೆಂಥಾ ವಿಚಿತ್ರ, ವಿಲಕ್ಷಣ ಘಟನೆ ಎಂದುಕೊಳ್ಳಬೇಡಿ. ಇದು ನಿಜವಾಗಿಯೂ ನಡೆದಿರುವ ಘಟನೆ ಹಾಗೂ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯ ಮೀಮ್ ಗಳಿಗೆ ಕಾರಣವಾಗಿರುವ ತಾಜಾ ಘಟನೆ.
ಆಗಿದ್ದು ಇಷ್ಟು... ಸುಪ್ರೀಂ ಕೋರ್ಟ್‌ನ ಇತ್ತೀಚಿನ ವಿಚಾರಣೆಯಲ್ಲಿ, ಹಿರಿಯ ವಕೀಲ ಎ.ಎಂ. ಸಿಂಗ್ವಿ ಅವರು ಆನ್ ಲೈನ್ ಮೂಲಕ ವಾದ ಮಂಡನೆ ಮಾಡುತ್ತಿದ್ದರು.
ಪರದೆಯ ಮೇಲೆ ಅಭಿಷೇಕ್ ಮನು ಸಿಂಘ್ವಿ ಅವರ ತಲೆ ಭಾಗಶಃ ಕಾಣೆಯಾಗಿತ್ತು. ವರ್ಚುವಲ್ ಯಡವಟ್ಟಿನ ಪರಿಣಾಮ ನ್ಯಾಯಾಲಯದಲ್ಲಿ ಕೆಲ ಕಾಲ ಹಾಸ್ಯದ ವಾತಾವರಣ ಮೂಡಿತ್ತು.
ನ್ಯಾಷನಲ್ ಕ್ಯಾಪಿಟಲ್ ರೀಜನ್ (ಎನ್‌ಸಿಆರ್) ನಲ್ಲಿ ಯಾವುದೇ ಬೀದಿ ಪ್ರಾಣಿಗಳು ಮುಕ್ತವಾಗಿ ಓಡಾಡಬಾರದು ಎಂದು ನಿರ್ದೇಶಿಸಿದ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಅವರ ಪೀಠವು ಈ ವಾರದ ಆರಂಭದಲ್ಲಿ ಹೊರಡಿಸಿದ ಸ್ವಯಂಪ್ರೇರಿತ ಆದೇಶಕ್ಕೆ ತಡೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ತ್ರಿಸದಸ್ಯ ಪೀಠವು ವಿಚಾರಣೆ ನಡೆಸುತ್ತಿತ್ತು.
ವರ್ಚುವಲ್ ಹಾಜರಿಯ ಸಮಯದಲ್ಲಿ, ನ್ಯಾಯಮೂರ್ತಿ ನಾಥ್ ಅವರು ವಿಚಿತ್ರವಾದ ಪರದೆಯ ಪರಿಣಾಮವನ್ನು ಗಮನಿಸಿದ್ದು "ಮಿಸ್ಟರ್ ಸಿಂಘ್ವಿ, ನಿಮ್ಮ ತಲೆಯನ್ನು ಏಕೆ ಕತ್ತರಿಸಲಾಗಿದೆ?" ಎಂದು ಕೇಳಿದರು, ಇದರಿಂದಾಗಿ ವಿಚಾರಣೆಯ ಅವಧಿಯಲ್ಲಿ ಸ್ವಲ್ಪ ಸಮಯದವರೆಗೆ ಲಘು ವಾತಾವರಣ ನಿರ್ಮಾಣವಾಗಿತ್ತು.
ನ್ಯಾಯಾಧೀಶರ ಪ್ರಶ್ನೆಗೆ ನಕ್ಕ ಸಿಂಘ್ವಿ, "ಇದು ತಂತ್ರಜ್ಞಾನದ ಯಡವಟ್ಟು, ಮೈಲಾರ್ಡ್!" ಎಂದು ಉತ್ತರಿಸಿದರು. ಈ ದೋಷ ಬಹುಶಃ ವರ್ಚುವಲ್ ಫಿಲ್ಟರ್‌ನಿಂದ ಉಂಟಾಗಿರಬಹುದು, ಅದು ಅವರ ತಲೆಯ ಮೇಲ್ಭಾಗವನ್ನು ಕಣ್ಮರೆ ಮಾಡಿ ಪರದೆಯ ಮೇಲೆ ವಿಲಕ್ಷಣವಾದ "ತಲೆಯಿಲ್ಲದ" ನೋಟವನ್ನು ಸೃಷ್ಟಿಸಿತು.
ಈ ಘಟನೆ ಅತ್ಯಂತ ಗಂಭೀರವಾದ ನ್ಯಾಯಾಲಯದ ವಿಚಾರಣೆಗಳಲ್ಲಿಯೂ ಸಹ, ತಂತ್ರಜ್ಞಾನವು ಕೆಲವು ಅನಿರೀಕ್ಷಿತ - ಮತ್ತು ಸ್ವಲ್ಪ ಹಾಸ್ಯಮಯ - ಕ್ಷಣಗಳನ್ನು ಉಂಟುಮಾಡಬಹುದು ಎಂಬುದನ್ನು ನೆನಪಿಸುತ್ತದೆ.
Advertisement