
ನವದೆಹಲಿ: ದೆಹಲಿ-ಎನ್‌ಸಿಆರ್‌ನಲ್ಲಿ ಬೀದಿ ನಾಯಿಗಳ ಹಾವಳಿಯ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಸ್ಥಳೀಯ ಅಧಿಕಾರಿಗಳನ್ನು ಟೀಕಿಸಿದ್ದು, "ಇಡೀ ಸಮಸ್ಯೆ"ಗೆ ಅವರ ನಿಷ್ಕ್ರಿಯತೆ ಕಾರಣ ಎಂದು ತರಾಟೆಗೆ ತೆಗೆದುಕೊಂಡಿದೆ.
ದೆಹಲಿ ಮತ್ತು ರಾಷ್ಟ್ರ ರಾಜಧಾನಿಯ ಸುತ್ತಮುತ್ತಲಿನ ಪ್ರದೇಶಗಳ ಬೀದಿ ನಾಯಿಗಳನ್ನು ಹಿಡಿದು, ಅವುಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ , ಸಂದೀಪ್ ಮೆಹ್ತಾ ಹಾಗೂ ಎನ್ ವಿ ಅಂಜಾರಿಯಾ ಅವರಿದ್ದ ಪೀಠ ಇಂದು ವಿಚಾರಣೆ ನಡೆಸಿದರು. ಈ ವೇಳೆ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತು. ಅಲ್ಲದೆ, ಸ್ಥಳೀಯ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.
ರೇಬೀಸ್‌ಗೆ ಕಾರಣವಾಗುವ ನಾಯಿ ಕಡಿತದಿಂದ ಮಕ್ಕಳು ಸಾಯುತ್ತಿದ್ದಾರೆ ಮತ್ತು ಬೀದಿ ನಾಯಿಗಳ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ ಮತ್ತು ಅದನ್ನು ಪ್ರಶ್ನಿಸಬಾರದು ಎಂದು ದೆಹಲಿ ಸರ್ಕಾರ ಗುರುವಾರ ನ್ಯಾಯಪೀಠಕ್ಕೆ ತಿಳಿಸಿತು.
ದೆಹಲಿ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ದೇಶದಲ್ಲಿ ಒಂದು ವರ್ಷದಲ್ಲಿ 37 ಲಕ್ಷಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ ಎಂದು ತ್ರಿಸದಸ್ಯ ಪೀಠಕ್ಕೆ ತಿಳಿಸಿದರು. "ಯಾರೂ ಪ್ರಾಣಿ ದ್ವೇಷಿಗಳಲ್ಲ" ಎಂದು ಮೆಹ್ತಾ ಪೀಠಕ್ಕೆ ತಿಳಿಸಿದರು.
ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಪರಿಸ್ಥಿತಿ "ತುಂಬಾ ಗಂಭೀರವಾಗಿದೆ" ಮತ್ತು ಈ ವಿಷಯವನ್ನು ಆಳವಾಗಿ ವಾದಿಸುವ ಅಗತ್ಯವಿದೆ ಎಂದು ಹೇಳಿದರು.
ದೆಹಲಿ-ಎನ್‌ಸಿಆರ್‌ನ ಅಧಿಕಾರಿಗಳಿಗೆ ಬೀದಿ ನಾಯಿಗಳನ್ನು ಸಾಗಿಸುವ ಹಾಗೂ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಲು ನೀಡಲಾಗಿರುವ ನಿರ್ದೇಶನ ಸೇರಿದಂತೆ ಆಗಸ್ಟ್ 11 ರಂದು ಸುಪ್ರೀಂ ಕೋರ್ಟ್ ಹೊರಡಿಸಿದ ಕೆಲವು ನಿರ್ದೇಶನಗಳಿಗೆ ತಡೆ ನೀಡುವಂತೆ ಕೋರಿದರು.
ವಾದ ಆಲಿಸಿದ ಬಳಿಕ ಮಾತನಾಡಿದ ನ್ಯಾ. ವಿಕ್ರಮ್ ನಾಥ್ ಅವರು, ಸಂಸತ್ತು ನಿಯಮಗಳು ಮತ್ತು ಕಾನೂನುಗಳನ್ನು ರೂಪಿಸುತ್ತದೆ. ಆದರೆ, ಜಾರಿಗೆ ತರಲಾಗಿಲ್ಲ. ಒಂದೆಡೆ, ಮನುಷ್ಯರು ಬಳಲುತ್ತಿದ್ದಾರೆ ಮತ್ತೊಂದೆಡೆ, ಪ್ರಾಣಿ ಪ್ರಿಯರೂ ಇಲ್ಲಿದ್ದಾರೆ. ಸ್ವಲ್ಪ ಜವಾಬ್ದಾರಿಯಿಂದ ವರ್ತಿಸಬೇಕಿದೆ... ಮಧ್ಯಪ್ರವೇಶ ಕೋರಿ ಅರ್ಜಿ ಸಲ್ಲಿಸಿದವರೆಲ್ಲರೂ ಅಫಿಡವಿಟ್‌ಗಳನ್ನು ಸಲ್ಲಿಸಬೇಕು ಮತ್ತು ಪುರಾವೆಗಳನ್ನು ಒದಗಿಸಬೇಕು ಎಂದು ಸೂಚನೆ ನೀಡಿದರು.
ಅಂತೆಯೇ ನ್ಯಾಯಪೀಠ ಮಧ್ಯಂತರ ಪರಿಹಾರವಾಗಿ ತೀರ್ಪಿಗೆ ತಡೆಯಾಜ್ಞೆ ನೀಡುವಂತೆ ಕೋರಿದ್ದ ಅರ್ಜಿಗಳಿಗೆ ಸಂಬಂಧಿಸಿದ ಆದೇಶವನ್ನು ಕಾಯ್ದಿರಿಸಿತು.
ಆಗಸ್ಟ್ 11 ರಂದು, ಸುಪ್ರೀಂ ಕೋರ್ಟ್, ಬೀದಿನಾಯಿ ಕಡಿತದಿಂದಾಗಿ, ವಿಶೇಷವಾಗಿ ಮಕ್ಕಳಲ್ಲಿ ರೇಬಿಸ್ ಹೆಚ್ಚಾದ ಕಾರಣದಿಂದಾಗಿ ದೆಹಲಿ-ಎನ್‌ಸಿಆರ್ ಅಧಿಕಾರಿಗಳಿಗೆ, ಬೀದಿಗಳಿಂದ ಎಲ್ಲಾ ಬೀದಿನಾಯಿಗಳನ್ನು "ಆದಷ್ಟು ಬೇಗ" ಶಾಶ್ವತವಾಗಿ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ನಿರ್ದೇಶಿಸಿತ್ತು. ಆರರಿಂದ ಎಂಟು ವಾರಗಳಲ್ಲಿ ಸುಮಾರು 5,000 ನಾಯಿಗಳಿಗೆ ಆಶ್ರಯಗಳನ್ನು ರಚಿಸುವ ಮೂಲಕ ಪ್ರಾರಂಭಿಸಲು ದೆಹಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.
ಇದಲ್ಲದೆ, ನಾಯಿಗಳ ಸ್ಥಳಾಂತರ ಕಾರ್ಯಾಚರಣೆ ವೇಳೆ ಯಾವುದೇ ರೀತಿಯ ಅಡಚಣೆ ಉಂಟಾದರೆ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನ್ಯಾಯಪೀಠ ಎಚ್ಚರಿಸಿತ್ತು.
Advertisement