
ಭಾರತೀಯ ಹೆದ್ದಾರಿ ಪ್ರಾಧಿಕಾರ (NHAI) 2025ರ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಇಂದು ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ದೇಶಾದ್ಯಂತ ಆಯ್ದ ರಾಷ್ಟ್ರೀಯ ಹೆದ್ದಾರಿಗಳು (NH) ಮತ್ತು ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇಗಳು (NE) ನಲ್ಲಿರುವ ಸುಮಾರು 1,150 ಟೋಲ್ ಪ್ಲಾಜಾಗಳಲ್ಲಿ ಈ ವಾರ್ಷಿಕ ಪಾಸ್ ಅನ್ವಯಿಸುತ್ತದೆ. ಇಂದಿನಿಂದ 'ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್' ನ ಅಧಿಕೃತ ಬುಕಿಂಗ್ ಸಹ ಪ್ರಾರಂಭವಾಗಿದೆ. ಬಳಕೆದಾರರು ಮನೆಯಿಂದಲೇ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು/ಸಕ್ರಿಯಗೊಳಿಸಬಹುದು. ಈ ವಾರ್ಷಿಕ ಪಾಸ್‌ಗೆ ಮೊದಲ ದಿನ ಬಳಕೆದಾರರಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ.
ಸಂಜೆಯ ವೇಳೆಗೆ 1.4 ಲಕ್ಷ ಪಾಸ್ ಖರೀದಿ
ವಾರ್ಷಿಕ ಪಾಸ್‌ಗೆ ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಂದ ಅದ್ಭುತ ಪ್ರತಿಕ್ರಿಯೆ ಬಂದಿದೆ. ಇದರ ಬುಕಿಂಗ್ ಇಂದಿನಿಂದ ಪ್ರಾರಂಭವಾಗಿದ್ದು ಮೊದಲ ದಿನ ಸಂಜೆ 7 ಗಂಟೆಯ ಹೊತ್ತಿಗೆ ಸುಮಾರು 1.4 ಲಕ್ಷ ಬಳಕೆದಾರರು ವಾರ್ಷಿಕ ಪಾಸ್ ಅನ್ನು ಖರೀದಿಸಿ ಸಕ್ರಿಯಗೊಳಿಸಿದ್ದಾರೆ. ಇದಲ್ಲದೆ, ಮೊದಲ ದಿನ ಟೋಲ್ ಪ್ಲಾಜಾಗಳಲ್ಲಿ ಸುಮಾರು 1.39 ಲಕ್ಷ ವಹಿವಾಟುಗಳನ್ನು ದಾಖಲಿಸಲಾಗಿದೆ. ಸುಮಾರು 20,000 ರಿಂದ 25,000 ಬಳಕೆದಾರರು ರಾಜಮಾರ್ಗಯಾತ್ರೆ ಅಪ್ಲಿಕೇಶನ್ ಅನ್ನು ನಿರಂತರವಾಗಿ ಬಳಸುತ್ತಿದ್ದು ವಾರ್ಷಿಕ ಪಾಸ್ ಬಳಕೆದಾರರು ಟೋಲ್ ಶುಲ್ಕದ ಶೂನ್ಯ ಕಡಿತಕ್ಕಾಗಿ SMS ಸ್ವೀಕರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ವಾರ್ಷಿಕ ಪಾಸ್‌ನೊಂದಿಗೆ ಪ್ರಯಾಣವನ್ನು ಸುಗಮಗೊಳಿಸಲು ಪ್ರತಿ ಟೋಲ್ ಪ್ಲಾಜಾದಲ್ಲಿ NHAI ಅಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಇದರ ಹೊರತಾಗಿ, ಪಾಸ್ ಬಳಕೆದಾರರ ದೂರುಗಳನ್ನು ಪರಿಹರಿಸಲು, 1033 ರಾಷ್ಟ್ರೀಯ ಹೆದ್ದಾರಿ ಸಹಾಯವಾಣಿಯನ್ನು 100ಕ್ಕೂ ಹೆಚ್ಚು ಅಧಿಕಾರಿಗಳನ್ನು ಸೇರಿಸುವ ಮೂಲಕ ಮತ್ತಷ್ಟು ಬಲಪಡಿಸಲಾಗಿದೆ.
FASTag ವಾರ್ಷಿಕ ಪಾಸ್ ಸಕ್ರಿಯಗೊಳಿಸುವುದು ಹೇಗೆ?
ಮೊದಲನೆಯದಾಗಿ FASTag ವಾರ್ಷಿಕ ಪಾಸ್‌ಗಾಗಿ ಬಳಕೆದಾರರು 3,000 ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ. ಅದು 1 ವರ್ಷ ಅಥವಾ 200 ಟ್ರಿಪ್‌ಗಳಿಗೆ ಮಾನ್ಯವಾಗಿರುತ್ತದೆ. ಇದನ್ನು NHAI ನ ಅಧಿಕೃತ ವೆಬ್‌ಸೈಟ್ ಮತ್ತು ರಾಜಮಾರ್ಗಯಾತ್ರೆ ಮೊಬೈಲ್ ಅಪ್ಲಿಕೇಶನ್ ಮೂಲಕ ಖರೀದಿಸಬಹುದು ಅಥವಾ ಸಕ್ರಿಯಗೊಳಿಸಬಹುದು. ಈ ಪಾಸ್ ಕಾರು, ಜೀಪ್ ಅಥವಾ ವ್ಯಾನ್‌ನಂತಹ ಖಾಸಗಿ ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ಪಾಸ್ ಅನ್ನು ವಾಣಿಜ್ಯ ವಾಹನಗಳಲ್ಲಿ ಬಳಸಲಾಗುವುದಿಲ್ಲ.
Advertisement