79th Independence Day: ರಕ್ತ-ನೀರು ಒಟ್ಟಿಗೆ ಹರಿಯಲ್ಲ, ನಿಮ್ಮ ಅಣುಬಾಂಬ್ ಬೆದರಿಕೆಗೆ ಹೆದರಲ್ಲ; ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ

ನಾವು ನಮ್ಮ ಸಶಸ್ತ್ರ ಪಡೆಗಳಿಗೆ ಮುಕ್ತ ಹಸ್ತ ನೀಡಿದ್ದೇವೆ. ನಮ್ಮ ದೇಶ ಭಯೋತ್ಪಾದಕರು ಮತ್ತು ಅವರನ್ನು ಬೆಂಬಲಿಸುವವರ ನಡುವೆ ವ್ಯತ್ಯಾಸವನ್ನು ನೋಡುವುದಿಲ್ಲ.
PM modi
ಪ್ರಧಾನಿ ಮೋದಿ
Updated on

ನವದೆಹಲಿ: ಭಾರತದ ಸಶಸ್ತ್ರ ಪಡೆಗಳು ಉಗ್ರರಿಗೆ ಅವರ ಕಲ್ಪನೆಗೂ ಮೀರಿ ಶಿಕ್ಷಿಸಿದ್ದು, ಆಪರೇಷನ್ ಸಿಂಧೂರ್ ಬಳಿಕ ಪಾಕಿಸ್ತಾನ "ನಿದ್ರೆ ಕಳೆದುಕೊಂಡಿದೆ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಹೇಳಿದ್ದಾರೆ.

79ನೇ ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿದ ನಂತರ ದೇಶದ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ ಅವರು, ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಇಡೀ ರಾಷ್ಟ್ರವು ಆಕ್ರೋಶಗೊಂಡಿದ್ದು, ಆಪರೇಷನ್ ಸಿಂಧೂರ್ "ಆ ಆಕ್ರೋಶದ ಪ್ರತಿಕ್ರಿಯೆಯಾಗಿತ್ತು ಎಂದು ಹೇಳಿದರು.

ನಾವು ನಮ್ಮ ಸಶಸ್ತ್ರ ಪಡೆಗಳಿಗೆ ಮುಕ್ತ ಹಸ್ತ ನೀಡಿದ್ದೇವೆ. ಇದೀಗ ನಮ್ಮ ದೇಶ ಭಯೋತ್ಪಾದಕರು ಮತ್ತು ಅವರನ್ನು ಬೆಂಬಲಿಸುವವರ ನಡುವೆ ವ್ಯತ್ಯಾಸವನ್ನು ನೋಡುವುದಿಲ್ಲ. ಭವಿಷ್ಯದಲ್ಲಿ ಪಾಕಿಸ್ತಾನದಿಂದ ಯಾವುದೇ ದುಷ್ಕೃತ್ಯ ಎದುರಾದರೂ ಅದಕ್ಕೆ ಶಿಕ್ಷೆಯನ್ನು ನಮ್ಮ ಸಶಸ್ತ್ರ ಪಡೆಗಳೇ ನಿರ್ಧರಿಸುತ್ತವೆ ಎಂದು ತಿಳಿಸಿದರು.

ಭಾರತದ ಮೇಲೆ ಪರಮಾಣು ಬೆದರಿಕೆಗಳು ಬಹಳ ಸಮಯದಿಂದ ಮುಂದುವರೆದಿವೆ. ಆದರೆ, ಅದನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ. ನಮ್ಮ ಶತ್ರುಗಳು ಪರಮಾಣು ಬೆದರಿಕೆ ಮುಂದುವರೆಸಿದರೆ, ನಾವು ಸೂಕ್ತ ಉತ್ತರವನ್ನು ನೀಡಲು ಸಿದ್ಧರಿದ್ದೇವೆ. ನಮ್ಮ ಸಶಸ್ತ್ರ ಪಡೆಗಳು ಪ್ರತಿಕ್ರಿಯೆ ನೀಡುತ್ತವೆ. ಪಾಕಿಸ್ತಾನದಲ್ಲಿ ನಮ್ಮ ಸಶಸ್ತ್ರ ಪಡೆಗಳು ಮಾಡಿದ ಹಾನಿ ದೊಡ್ಡದಾಗಿತ್ತು. ಭಾರತವು ಇನ್ನು ಮುಂದೆ ಪರಮಾಣು ಬೆದರಿಕೆಗಳನ್ನು ಸಹಿಸುವುದಿಲ್ಲ ಎಂದು ನಿರ್ಧರಿಸಿದೆ, ನಾವು ಯಾವುದೇ ಬೆದರಿಕೆಗೆ ಹೆದರುವುದಿಲ್ಲ, ಬಲಿಯಾಗುವುದಿಲ್ಲ ಎಂದರು.

ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ ಎಂದು ಭಾರತ ಈಗಾಗಲೇ ನಿರ್ಧಾರ ಮಾಡಿದೆ. ಸಿಂಧೂ ನದಿ ನೀರು ಒಪ್ಪಂದವು ಅನ್ಯಾಯವಾಗಿದೆ ಎಂದು ನಮ್ಮ ದೇಶದ ಜನರು ಅರಿತುಕೊಂಡಿದ್ದಾರೆ. ಸಿಂಧೂ ನದಿ ಒಪ್ಪಂದದಿಂದ ನೀರು ಶತ್ರುಗಳ ಭೂಮಿಗೆ ನೀರಾವರಿಗೆ ಸಹಾಯಕವಾಗಿದೆ. ಆದರೆ, ನಮ್ಮದೇ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಭಾರತದಲ್ಲಿ ಹುಟ್ಟುವ ನದಿ ನೀರಿನ ಹಕ್ಕು ಭಾರತೀರಿಗೆ ಇದೆ. ದೇಶದ ರೈತರಿಗೆ ಇದೆ. ಕಳೆದ ಏಳು ದಶಕಗಳಿಂದ ಒಪ್ಪಂದದ ಮೇರೆಗೆ ಬೇರೆ ದೇಶಗಳಿಗೆ ಭಾರತ ನೀರುಣಿಸುತ್ತಿತ್ತು. ನಮ್ಮ ಭೂಮಿ ಬರಿದಾಗುತ್ತಿತ್ತು. ಅಂದ ಮೇಲೆ ಅಂತಹ ಒಪ್ಪಂದ ಏಕೆ ಬೇಕು ಎಂದು ಪ್ರಶ್ನೆ ಮಾಡಿದರು.

ಭಾರತದ ಹಾಗೂ ನಮ್ಮ ರೈತರ ಹಿತದೃಷ್ಠಿಯಿಂದ ಪಾಕ್‌ ಜತೆಗಿನ ಸಿಂಧು ನದಿ ಒಪ್ಪಂದಕ್ಕೆ ಮುಂದೆಂದೂ ಒಪ್ಪಿಗೆ ನೀಡುವುದಿಲ್ಲ. ಭಯೋತ್ಪಾದಕತೆ ಪೋಷಿಸುವವರನ್ನು ನಾವು ಇನ್ನು ಮುಂದೆ ಬೇರೆ ಬೇರೆ ಎಂದು ಪರಿಗಣಿಸದೇ ಅವರೆಲ್ಲರನ್ನು ಒಂದೇ ಎಂದು ಕರೆಯುತ್ತೇವೆ. ಉಗ್ರರಿಗೆ ಸಹಾಯ ಮಾಡುವವರೆಲ್ಲರನ್ನು ಭಯೋತ್ಪಾದಕರಂತೆ ಕಾಣುತ್ತೇವೆ ಎಂದು ಪಾಕಿಸ್ತಾನ ಹಾಗೂ ಉಗ್ರ ಬೆಂಬಲಿತ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದರು.

PM modi
79ನೇ ಸ್ವಾತಂತ್ರ್ಯೋತ್ಸವ: ವರ್ಣರಂಜಿತ ಕೇಸರಿ ರುಮಾಲು ಧರಿಸಿ ಎಲ್ಲರ ಗಮನ ಸೆಳೆದ ಪ್ರಧಾನಿ ಮೋದಿ

ಅಮೆರಿಕಾ ವ್ಯಾಪಾರ ಬಿಕ್ಕಟ್ಟು: ಸ್ವಾವಲಂಬನೆ ಪ್ರತಿಪಾಧಿಸಿದ ಪ್ರಧಾನಿ ಮೋದಿ

ಇದೇ ವೇಳೆ ಭಾರತ ಸರ್ಕಾರವು ದೇಶದ ರೈತರ ಹಿತಾಸಕ್ತಿಗಳ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳಲ್ಲ. ರೈತರು ದೇಶವನ್ನು "ಸ್ವಾವಲಂಬಿ"ಯನ್ನಾಗಿ ಮಾಡಿದ್ದಾರೆ ಎಂದು ಹೇಳುವ ಮೂಲಕ ವ್ಯಾಪಾರ ಒಪ್ಪಂದದ ಕುರಿತಾದ ಬಿಕ್ಕಟ್ಟಿನ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರಿಯಾಗಿರಿಸಿಕೊಂಡು ಮೋದಿಯವರು ಸೂಕ್ಷ್ಮ ಸಂದೇಶವನ್ನು ರವಾನಿಸಿದರು.

ತಂತ್ರ್ಯದ ನಂತರ ಎಲ್ಲರಿಗೂ ಆಹಾರ ಭದ್ರತೆ ಖಚಿತಪಡಿಸುವುದು ಒಂದು ಸವಾಲಾಗಿತ್ತು. ಈ ಸವಾಲಿರಗೆ ನಮ್ಮ ರೈತರು ಹಗೆಲು ಕೊಟ್ಟು ನಮ್ಮನ್ನು ಸ್ವಾವಲಂಬಿಗಳನ್ನಾಗಿ ಮಾಡಿದ್ದಾರೆ. 'ಆತ್ಮನಿರ್ಭರ ಭಾರತ' ಇತರ ದೇಶಗಳ ಮೇಲೆ ಅವಲಂಬಿತರಾಗುವುದನ್ನು ತಪ್ಪಿಸುವ ಮಾರ್ಗವಾಗಿದೆ. ಭಾರತದ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ನಾವು ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.

ಆಪರೇಷನ್ ಸಿಂಧೂರ್‌ನಲ್ಲಿ ಭಾರತ ಎಷ್ಟು ಸ್ವಾವಲಂಬಿಯಾಗಿದೆ ಎಂದು ನಾವು ನೋಡಿದ್ದೇವೆ. ಶತ್ರುಗಳಿಗೆ ಕ್ಷಣಾರ್ಧದಲ್ಲಿ ಅವರನ್ನು ನಾಶಮಾಡುವ ಶಕ್ತಿ ಏನೆಂದು ತಿಳಿದಿರಲಿಲ್ಲ. ಕಳೆದ 10 ವರ್ಷಗಳಿಂದ, ನಾವು ಮೇಕ್ ಇನ್ ಇಂಡಿಯಾವನ್ನು ಒಂದು ಧ್ಯೇಯವಾಗಿ ತೆಗೆದುಕೊಳ್ಳುತ್ತಿದ್ದೇವೆ. 21 ನೇ ಶತಮಾನವು ತಂತ್ರಜ್ಞಾನದ ಶತಮಾನವಾಗಿದೆ. ನಾವು ಸ್ವದೇಶಿ ಉತ್ಪನ್ನಗಳನ್ನು ಬಲವಂತದಿಂದ ಅಲ್ಲ ಬದಲಾಗಿ ತಾಕತ್ತಾಗಿ ಬಳಸಬೇಕು. ವೂಕಲ್ ಫಾರ್ ಲೋಕಲ್​​ ಅನ್ನು ಎಲ್ಲಾ ಭಾರತೀಯರ ಮಂತ್ರವಾಗಿ ಮಾಡಬೇಕು.

ಭಾರತದ ಜನರ ಬೆವರಿನಿಂದ ತಯಾರಿಸಿದ ಮತ್ತು ನಮ್ಮ ಜನರ ಕಠಿಣ ಪರಿಶ್ರಮದ ತಯಾರಿಸಿದ ವಸ್ತುಗಳನ್ನು ಮಾತ್ರ ನಾವು ಖರೀದಿಸಬೇಕು.ಆಗ ದೇಶವು ಕೆಲವೇ ದಿನಗಳಲ್ಲಿ ಬದಲಾಗುತ್ತದೆ.ದೇಶದ ಯುವಕರಿಗೆ ತಮ್ಮ ಆಲೋಚನೆಗಳನ್ನು ಎಂದಿಗೂ ಸಾಯಲು ಬಿಡಬೇಡಿ.ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ. ಸೈಬರ್ ಭದ್ರತೆಯಿಂದ ಹಿಡಿದು ಕೃತಕ ಬುದ್ಧಿಮತ್ತೆಯವರೆಗೆ ಎಲ್ಲವೂ ನಮ್ಮದಾಗಿರುವುದು ಇಂದಿನ ಅಗತ್ಯವಲ್ಲವೇ? ನಮ್ಮ ಜನರ ಶಕ್ತಿ ಇದರಲ್ಲಿ ಭಾಗಿಯಾಗಬೇಕು. ಇಂದು, ಅದು ಸಾಮಾಜಿಕ ಮಾಧ್ಯಮವಾಗಲಿ ಅಥವಾ ವಿಶ್ವದ ಇತರ ವೇದಿಕೆಗಳಾಗಲಿ, ನಾವು ವಿಶ್ವದ ವೇದಿಕೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ಯುಪಿಐನ ಶಕ್ತಿಯನ್ನು ಜಗತ್ತಿಗೆ ತೋರಿಸಿದ್ದೇವೆ. ಡಿಜಿಟಲ್ ವಹಿವಾಟಿನಲ್ಲಿ ಭಾರತ ಮಾತ್ರ ಶೇ.50 ರಷ್ಟು ಕೊಡುಗೆ ನೀಡುತ್ತಿದೆ.

ಸಮುದ್ರದ ಕೆಳಗೆ ತೈಲ ನಿಕ್ಷೇಪಗಳನ್ನು ಹುಡುಕುವ ನಿಟ್ಟಿನಲ್ಲಿ ನಾವು ಒಂದು ಮಿಷನ್ ಮೋಡ್‌ನಲ್ಲಿ ಕೆಲಸ ಮಾಡಲು ಬಯಸುತ್ತೇವೆ. ಭಾರತವು ಆಳವಾದ ನೀರಿನ ಪರಿಶೋಧನಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಲು ಇದು ನಮ್ಮ ಪ್ರಮುಖ ಘೋಷಣೆಯಾಗಿದೆ. ಇಂದು ಜಗತ್ತು ನಿರ್ಣಾಯಕ ಖನಿಜಗಳ ಬಗ್ಗೆ ಜಾಗರೂಕವಾಗಿದೆ. ನಿರ್ಣಾಯಕ ಖನಿಜಗಳಲ್ಲಿ ಸ್ವಾವಲಂಬನೆಯೂ ನಮಗೆ ಅತ್ಯಗತ್ಯ.

ರಕ್ಷಣಾ, ತಂತ್ರಜ್ಞಾನ ಇತ್ಯಾದಿ ಕ್ಷೇತ್ರಗಳಲ್ಲಿ ನಿರ್ಣಾಯಕ ಖನಿಜಗಳು ಬಹಳ ದೊಡ್ಡ ಪಾತ್ರವನ್ನು ವಹಿಸುತ್ತವೆ. ಅದಕ್ಕಾಗಿಯೇ ನಾವು ರಾಷ್ಟ್ರೀಯ ನಿರ್ಣಾಯಕ ಮಿಷನ್ ಅನ್ನು ಪ್ರಾರಂಭಿಸಿದ್ದೇವೆಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com