
ದಿಂಡಿಗಲ್: ತಮಿಳುನಾಡು ಸಚಿವ ಐ ಪೆರಿಯಸಾಮಿ, ಅವರ ಪುತ್ರ ಡಿಎಂಕೆ ಶಾಸಕ ಐ ಪಿ ಸೆಂಥಿಲ್ ಕುಮಾರ್ ಮತ್ತು ಪುತ್ರಿ ಇಂದ್ರಾಣಿ ಅವರಿಗೆ ಸಂಬಂಧಿಸಿದ ದಿಂಡಿಗಲ್‌ನ ಮನೆ ಸೇರಿದಂತೆ ಹಲವು ಕಡೆ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಶನಿವಾರ ಬೆಳಗಿನ ಜಾವ ದಾಳಿ ನಡೆಸಿದ್ದಾರೆ.
ಮೂಲಗಳ ಪ್ರಕಾರ, ಮಧುರೈ ನಗರದ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ತಂಡ, ಇಂದು ದಿಂಡಿಗಲ್‌ನ ದುರೈರಾಜ್ ನಗರದಲ್ಲಿರುವ ಗ್ರಾಮೀಣಾಭಿವೃದ್ಧಿ ಸಚಿವ ಐ ಪೆರಿಯಸಾಮಿ ಅವರ ಮನೆಯಲ್ಲಿ ತೀವ್ರ ಶೋಧ ನಡೆಸಿದೆ.
ಇದಲ್ಲದೆ, ಸಚಿವರ ಪುತ್ರ ಮತ್ತು ಪಳನಿ ಶಾಸಕ ಐ ಪಿ ಸೆಂಥಿಲ್ ಕುಮಾರ್ ಅವರ ಸೀಲಪಾಡಿಯಲ್ಲಿರುವ ಮನೆ ಮತ್ತು ದಿಂಡಿಗಲ್‌ನ ವಲ್ಲಾಲರ್ ನಗರದಲ್ಲಿರುವ ಸಚಿವರ ಪುತ್ರಿ ಇಂದ್ರಾಣಿ ಅವರ ಮನೆಯ ಮೇಲೆಯೂ ಎರಡು ತಂಡಗಳು ದಾಳಿ ನಡೆಸಿವೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಡಿ ಕ್ರಮದ ಬಗ್ಗೆ ಪೆರಿಯಸಾಮಿ ಅಥವಾ ಡಿಎಂಕೆಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಮದ್ರಾಸ್ ಹೈಕೋರ್ಟ್ ಏಪ್ರಿಲ್ 29, 2025 ರಂದು ಗ್ರಾಮೀಣಾಭಿವೃದ್ಧಿ ಸಚಿವ ಐ ಪೆರಿಯಸಾಮಿ ಮತ್ತು ಅವರ ಕುಟುಂಬದ ವಿರುದ್ಧ ದಾಖಲಾಗಿದ್ದ ಅಕ್ರಮ ಆಸ್ತಿ(ಡಿಎ) ಪ್ರಕರಣವನ್ನು ಪರಿಶೀಲಿಸಿತ್ತು ಎಂಬುದನ್ನು ಇಲ್ಲಿ ಗಮನಿಸಬಹುದು.
Advertisement