
ನಾಗಪುರ: ಟ್ರಕ್ ಡಿಕ್ಕಿ ಹೊಡೆದು ಸಾವನ್ನಪ್ಪಿದ ಪತ್ನಿಯ ಮೃತದೇಹವನ್ನು ವ್ಯಕ್ತಿಯೊಬ್ಬ ತನ್ನ ಮೋಟಾರ್ ಸೈಕಲ್‌ನಲ್ಲಿ ಹೊತ್ತುಕೊಂಡು ಹೋಗುತ್ತಿದ್ದ ಮನಕಲುಕುವ ದೃಶ್ಯವೊಂದು ಕಳೆದ ವಾರ ವೈರಲ್ ಆಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ನಾಗಪುರ ಪೊಲೀಸರು ಕೃತಕ ಬುದ್ಧಿಮತ್ತೆ (AI) ಬಳಸಿಕೊಂಡು ಚಾಲಕನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಆಗಸ್ಟ್ 9ರಂದು ನಾಗ್ಪುರ-ಜಬಲ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದ ನಂತರ ಯಾರೂ ಸಹಾಯಕ್ಕೆ ಬಾರದ ಕಾರಣ ತನ್ನ ಪತ್ನಿಯ ಮೃತದೇಹವನ್ನು ಬೈಕ್ ಗೆ ಕಟ್ಟಿ ಸಾಗಿಸಬೇಕಾಯಿತು ಎಂದು ಪತಿ ಬೈಕರ್ ಅಮಿತ್ ಯಾದವ್ ಹೇಳಿಕೊಂಡಿದ್ದರು. ಮೊದಲಿಗೆ ದಿಯೋಲಾಪರ್ ಪೊಲೀಸರಿಗೆ ಆರಂಭದಲ್ಲಿ ಟ್ರಕ್ ಚಾಲಕನ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಅಪರಾಧ ತಡೆಗಟ್ಟುವಿಕೆ ಮತ್ತು ತನಿಖೆಯಲ್ಲಿ ಪೊಲೀಸರಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾದ AI-MARVEL (ಮಹಾರಾಷ್ಟ್ರ ಅಡ್ವಾನ್ಸ್ಡ್ ರಿಸರ್ಚ್ ಅಂಡ್ ವಿಜಿಲೆನ್ಸ್ ಫಾರ್ ಎನ್ಹ್ಯಾನ್ಸ್ಡ್ ಲಾ ಎನ್‌ಫೋರ್ಸ್‌ಮೆಂಟ್) ಬಳಸಿಕೊಂಡು ಪೊಲೀಸರು ವಿವಿಧ ಸಿಸಿಟಿವಿ ಕ್ಯಾಮೆರಾಗಳಿಂದ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದ್ದರು.
ನಂತರ ಚಾಲಕನನ್ನು ಉತ್ತರ ಪ್ರದೇಶದ ಫರೂಕಾಬಾದ್ ನಿವಾಸಿ 28 ವರ್ಷದ ಸತ್ಯಪಾಲ್ ರಾಜೇಂದ್ರ ಎಂಬುದನ್ನು ಪತ್ತೆಹಚ್ಚಿದ ಪೊಲೀಸರು ಆಗಸ್ಟ್ 16ರಂದು ಟ್ರಕ್ ಅನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯವರಾದ ಯಾದವ್, ತನ್ನ ಪತ್ನಿ ಗ್ಯಾರ್ಸಿ ಜೊತೆ ನಾಗ್ಪುರದ ಲೋನಾರಾದಿಂದ ನೆರೆಯ ರಾಜ್ಯದ ಕರಣ್‌ಪುರಕ್ಕೆ ಪ್ರಯಾಣಿಸುತ್ತಿದ್ದಾಗ ವೇಗವಾಗಿ ಬಂದ ಟ್ರಕ್ ಅವರ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದಿತ್ತು. ಗ್ಯಾರ್ಸಿ ರಸ್ತೆ ಮೇಲೆ ಬಿದ್ದಾಗ ಟ್ರಕ್ ಅವರ ಮೇಲೆ ಹರಿದಿತ್ತು ಎಂದು ತಿಳಿಸಿದರು.
ಯಾದವ್ ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಚಾಲಕರಿಂದ ಸಹಾಯಕ್ಕಾಗಿ ಬೇಡಿಕೊಂಡರೂ, ಅವರಲ್ಲಿ ಯಾರೂ ನಿಲ್ಲಿಸಲಿಲ್ಲ. ಹೀಗಾಗಿ ಬೇರೆ ದಾರಿಯಿಲ್ಲದೆ ಯಾದವ್ ಗ್ಯಾರ್ಸಿಯ ದೇಹವನ್ನು ದ್ವಿಚಕ್ರ ವಾಹನಕ್ಕೆ ಕಟ್ಟಿ ಮನೆಗೆ ಕೊಂಡೊಯ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಪೊಲೀಸ ಸಂಚಾರಿ ವಾಹನ ದ್ವಿಚಕ್ರ ವಾಹನವನ್ನು ತಡೆದು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನಾಗ್ಪುರದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜಿಗೆ ರವಾನಿಸಿದ್ದರು.
Advertisement